ನವದೆಹಲಿ: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ನೇತೃತ್ವದ 11 ಸದಸ್ಯರ ಭಾರತೀಯ ನಿಯೋಗ ಮಂಗಳವಾರ ಫ್ರಾನ್ಸ್‌ನ ಪ್ಯಾರಿಸ್ ನಡೆದ ಕಾನ್ ಫಿಲ್ಮ್ ಫೆಸ್ಟಿವಲ್ ಜ್ಯೂರಿ-2022 ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಹಿಸಿದರು. ಭಾರತದ ಪ್ರಮುಖ ಸಂಗೀತ ಕ್ಷೇತ್ರದ ತಾರೆಯರು, ನಟಿಯರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಮೂಲಕ ಸಂಚಲನ ಉಂಟು ಮಾಡಿದರು.
ಸಾಂಪ್ರದಾಯಿಕ ಉಡುಗೆ ತೊಟ್ಟು ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಅನುರಾಗ್ ಠಾಕೂರ್, ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್, ಸಂಗೀತ ಸಂಯೋಜಕ ರಿಕಿ ಕೇಜ್, ಗೀತಾ ರಚನೆಕಾರ ಮತ್ತು ಕವಿ ಪ್ರಸೂನ್ ಜೋಶಿ ಮತ್ತು ಹಿರಿಯ ಚಿತ್ರ ನಿರ್ದೇಶಕ ಶೇಖರ್ ಕಪೂರ್, ತಮನ್ನಾ ಭಾಟಿಯಾ, ಪೂಜಾ ಹೆಗ್ಡೆ, ಜನಪದ ಸಂಗೀತ ರಚನಾಕಾರ ಮತ್ತು ಗಾಯಕ ಮಾಮೆ ಖಾನ್ ಹಾಗೂ ನಟಿ ನಯನತಾರಾ ಸೇರಿದಂತೆ ಹಲವರು ರೆಡ್ ಕಾರ್ಪೆಟ್ ಮೇಲೆ ನಡೆದು ಎಲ್ಲರ ಗಮನ ಸೆಳೆದರು.
ಪ್ರಾದೇಶಿಕ ಚಿತ್ರಮಂದಿರಗಳ ರಾಯಭಾರಿಗಳು ಈ ನಿಯೋಗದ ಭಾಗವಾಗಿದ್ದರು. ಈ ಬಾರಿ ಭಾರತದ ಸಂಸ್ಕೃತಿ, ಪರಂಪರೆ, ಗತವೈಭವ ಮತ್ತು ಅಭಿವೃದ್ಧಿಯನ್ನು ಚಲನಚಿತ್ರಗಳ ಮೂಲಕ ಪ್ರದರ್ಶಿಸುವ ಉದ್ದೇಶವಿದೆ. ಅದಕ್ಕಾಗಿ ದೇಶದ ನಾನಾ ಆಯಾಮಗಳು ಹಾಗೂ ಸಾಮರ್ಥ್ಯಗಳನ್ನು ಬಿಂಬಿಸುವ ರೀತಿಯಲ್ಲಿ ವಿಶಿಷ್ಟ ಪ್ರತಿಭೆಗಳನ್ನು ನಿಯೋಗಕ್ಕೆ ಆಯ್ಕೆ ಮಾಡಲಾಗಿದೆ.