ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ವರ್ಚುವಲ್ ಶೃಂಗಸಭೆ ನಡೆಸಿ, ಉಭಯ ರಾಷ್ಟ್ರಗಳ ಸಂಬಂಧಿತ ಹಲವು ಸಮಕಾಲಿನ ವಿಚಾರಗಳನ್ನು ಚರ್ಚಿಸಿದ್ದಾರೆ.
ಭಾರತ ಮತ್ತು ಬ್ರಿಟನ್ ದೀರ್ಘಕಾಲದ ಸ್ನೇಹ ಸಂಬಂಧಗಳನ್ನು ಹೊಂದಿವೆ. ಪ್ರಜಾಪ್ರಭುತ್ವ, ಮೂಲ ಸ್ವಾತಂತ್ರ್ಯ ಮತ್ತು ಕಾನೂನುಬದ್ಧತೆ, ಪರಸ್ಪರ ಪೂರಕ ಮತ್ತು ಬದ್ಧತೆಯ ಸಮನ್ವಯ ವೃದ್ಧಿಯ ಕಾರ್ಯತಂತ್ರದ ಸಹಭಾಗಿತ್ವ ಹೊಂದಿವೆ.
ಸಮಗ್ರ ಕಾರ್ಯತಂತ್ರದ ಸಹಭಾಗಿತ್ವಕ್ಕಾಗಿ ದ್ವಿಪಕ್ಷೀಯ ಸಂಬಂಧಗಳನ್ನು ವೃದ್ಧಿಸಲು ಮಹತ್ವಾಕಾಂಕ್ಷೆಯ ‘ರೋಡ್ ಮ್ಯಾಪ್ 2030’ ಅನ್ನು ಶೃಂಗಸಭೆಯಲ್ಲಿ ಅಂಗೀಕರಿಸಲಾಯಿತು. ಈ ಮಾರ್ಗದರ್ಶಿಯು ಜನರ ನಡುವಿನ ಸಂಪರ್ಕಗಳು, ವ್ಯಾಪಾರ ಮತ್ತು ಆರ್ಥಿಕತೆ, ರಕ್ಷಣೆ ಮತ್ತು ಸುರಕ್ಷತೆ, ಹವಾಮಾನ ಕ್ರಮ ಮತ್ತು ಆರೋಗ್ಯದಂತಹ ಪ್ರಮುಖ ಕ್ಷೇತ್ರಗಳಲ್ಲಿ ಮುಂದಿನ ಹತ್ತು ವರ್ಷಗಳಲ್ಲಿ ಗಾಢವಾದ ಮತ್ತು ಬಲವಾದ ಕ್ರಮಗಳಿಗೆ ದಾರಿ ಮಾಡಿಕೊಡುತ್ತದೆ.
ಲಸಿಕೆಗಳ ಯಶಸ್ವಿ ಸಹಭಾಗಿತ್ವ ಸೇರಿದಂತೆ ಕೋವಿಡ್-19 ಪರಿಸ್ಥಿತಿ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ನಿರಂತರ ಸಹಕಾರದ ಬಗ್ಗೆ ಉಭಯ ನಾಯಕರು ಚರ್ಚಿಸಿದರು.
ಭಾರತದಲ್ಲಿ ಕೋವಿಡ್-19 ತೀವ್ರ ತರವಾದ ಎರಡನೇ ಅಲೆಯ ಹಿನ್ನೆಲೆಯಲ್ಲಿ ಬ್ರಿಟನ್ ಒದಗಿಸಿದ ತ್ವರಿತ ವೈದ್ಯಕೀಯ ನೆರವಿಗೆ ಪ್ರಧಾನಿ ಮೋದಿ ಅವರು ಪ್ರಧಾನ ಮಂತ್ರಿ ಜಾನ್ಸನ್ ಅವರಿಗೆ ಧನ್ಯವಾದ ತಿಳಿಸಿದರು. ಪ್ರಧಾನ ಮಂತ್ರಿ ಜಾನ್ಸನ್ ಅವರು, ಕಳೆದ ವರ್ಷ ಬ್ರಿಟನ್ ಮತ್ತು ಇತರ ದೇಶಗಳಿಗೆ ಔಷಧಗಳು ಮತ್ತು ಲಸಿಕೆಗಳೂ ಸೇರಿದಂತೆ ಇತರ ನೆರವು ನೀಡಿದ ಭಾರತವನ್ನು ಶ್ಲಾಘಿಸಿದರು.
ವಿಶ್ವದ 5 ಮತ್ತು 6ನೇ ಅತಿದೊಡ್ಡ ಆರ್ಥಿಕತೆಗಳ ನಡುವಿನ ವ್ಯಾಪಾರ ಸಾಮರ್ಥ್ಯವನ್ನು ವೃದ್ಧಿಸುವ ಮತ್ತು 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆಯ ಗುರಿ ನಿಗದಿಪಡಿಸುವ 'ವರ್ಧಿತ ವ್ಯಾಪಾರ ಸಹಭಾಗಿತ್ವ'ಕ್ಕೆ (ಇಟಿಪಿ) ಉಭಯ ಪ್ರಧಾನಿಗಳು ಚಾಲನೆ ನೀಡಿದರು.
ಇಟಿಪಿಯ ಭಾಗವಾಗಿ, ತ್ವರಿತ ಪ್ರಯೋಜನಗಳನ್ನು ನೀಡುವ ಮಧ್ಯಂತರ ವ್ಯಾಪಾರ ಒಪ್ಪಂದ ಪರಿಗಣಿಸುವುದು ಸೇರಿದಂತೆ ಸಮಗ್ರ ಮತ್ತು ಸಮತೋಲಿತ ಎಫ್‌ಟಿಎಗಾಗಿ ಮಾತುಕತೆ ನಡೆಸುವ ಮಾರ್ಗಸೂಚಿಗೆ ಭಾರತ ಮತ್ತು ಬ್ರಿಟನ್ ಸಮ್ಮತಿ ಸೂಚಿಸಿದವು. ಭಾರತ ಮತ್ತು ಬ್ರಿಟನ್ ನಡುವಿನ ವರ್ಧಿತ ವ್ಯಾಪಾರ ಸಹಭಾಗಿತ್ವವು ಎರಡೂ ದೇಶಗಳಲ್ಲಿ ಲಕ್ಷಾಂತರ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ.
ಸಂಶೋಧನೆ ಮತ್ತು ಅನುಶೋದನೆಯ ಸಹಯೋಗಗಳಲ್ಲಿ ಬ್ರಿಟನ್, ಭಾರತದ ಎರಡನೇ ಅತಿದೊಡ್ಡ ಪಾಲುದಾರ ದೇಶವಾಗಿದೆ. ವರ್ಚುವಲ್ ಶೃಂಗಸಭೆಯಲ್ಲಿ ಹೊಸ ಭಾರತ-ಯುಕೆ ‘ಜಾಗತಿಕ ನಾವೀನ್ಯತಾ ಸಹಭಾಗಿತ್ವ' ಘೋಷಿಸಲಾಯಿತು, ಇದು ಆಫ್ರಿಕಾದಿಂದ ಆರಂಭಿಸಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಅಂತರ್ಗತ ಭಾರತೀಯ ಆವಿಷ್ಕಾರಗಳ ವರ್ಗಾವಣೆ ಗುರಿ ಹೊಂದಿದೆ. ಡಿಜಿಟಲ್ ಮತ್ತು ಐಸಿಟಿ ಉತ್ಪನ್ನಗಳು ಸೇರಿದಂತೆ ಹೊಸ ಮತ್ತು ನವೀನ ತಂತ್ರಜ್ಞಾನಗಳ ಸಹಕಾರವನ್ನು ಹೆಚ್ಚಿಸಲು ಮತ್ತು ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವಕ್ಕಾಗಿ ಕೆಲಸ ಮಾಡಲು ಎರಡೂ ದೇಶಗಳು ಸಮ್ಮತಿಸಿದವು. ಕಡಲು ಸಂಬಂಧಿತ, ಭಯೋತ್ಪಾದನೆ ನಿಗ್ರಹ ಮತ್ತು ಸೈಬರ್‌ಪೇಸ್ ಡೊಮೇನ್‌ಗಳನ್ನು ಒಳಗೊಂಡಂತೆ ರಕ್ಷಣೆ ಮತ್ತು ಭದ್ರತಾ ಸಂಬಂಧಗಳನ್ನು ಬಲಪಡಿಸಲು ಸಹ ಅವರು ಒಪ್ಪಿಕೊಂಡರು.
ಇಂಡೋ-ಪೆಸಿಫಿಕ್ ಮತ್ತು ಜಿ 7 ಸಹಕಾರ ಸೇರಿದಂತೆ ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಇಬ್ಬರೂ ಪ್ರಧಾನ ಮಂತ್ರಿಗಳು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಸಾಧಿಸಲು ಹವಾಮಾನ ಕುರಿತ ಕ್ರಮಗಳ ಬದ್ಧತೆಯನ್ನು ಅವರು ಪುನರುಚ್ಚರಿಸಿದರು ಮತ್ತು ಈ ವರ್ಷದ ಬ್ರಿಟನ್ ಆಯೋಜಿಸಿರುವ CoP26ನಲ್ಲಿ ನಿಕಟವಾಗಿ ತೊಡಗಿಸಿಕೊಳ್ಳಲು ಒಪ್ಪಿಕೊಂಡರು.
ಭಾರತ ಮತ್ತು ಬ್ರಿಟನ್ ವಲಸೆ ಮತ್ತು ಸಂಚಾರದ ಬಗ್ಗೆ ಸಮಗ್ರ ಸಹಭಾಗಿತ್ವವನ್ನು ಪ್ರಾರಂಭಿಸಿದ್ದು, ಇದು ಉಭಯ ದೇಶಗಳ ನಡುವಿನ ವಿದ್ಯಾರ್ಥಿಗಳು ಮತ್ತು ವೃತ್ತಿಪರರ ಸಂಚಾರಕ್ಕೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ.
ಪರಿಸ್ಥಿತಿ ತಿಳಿಯಾದ ನಂತರ ಪ್ರಧಾನಿ ಜಾನ್ಸನ್ ಅವರನ್ನು ಭಾರತಕ್ಕೆ ಸ್ವಾಗತಿಸುವ ಆಶಯವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದರು. ಜಿ -7 ಶೃಂಗಸಭೆಯಲ್ಲಿ ಭಾಗವಹಿಸಲು ಬ್ರಿಟನ್ ಗೆ ಭೇಟಿ ನೀಡುವಂತೆ ಪ್ರಧಾನಿ ಮೋದಿಯವರಿಗೆ ಪ್ರಧಾನಿ ಜಾನ್ಸನ್ ಮತ್ತೊಮ್ಮೆ ಆಹ್ವಾನವನ್ನು ನೀಡಿದರು.