ನವದೆಹಲಿ:ಮುಂದಿನ ಎರಡು ದಿನಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಸೋಮವಾರ ತಿಳಿಸಿದೆ. ಕೇರಳದಲ್ಲಿ ಹೆಚ್ಚಿನ ಮಳೆಯಾಗಲಿದ್ದು, 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಅದರಲ್ಲೂ ಮಲಪ್ಪುರಂ, ಇಡುಕ್ಕಿ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ನವೆಂಬರ್ 6 ರಿಂದ 8 ರ ನಡುವೆ ದಕ್ಷಿಣ ಭಾರತದ ಕೆಲ ರಾಜ್ಯಗಳಲ್ಲಿ ಮಳೆಯಾದರೆ, ಮುಂದಿನ 5 ದಿನಗಳಲ್ಲಿ ದೇಶದ ಉಳಿದ ರಾಜ್ಯಗಳಲ್ಲಿ ಯಾವುದೇ ಗಮನಾರ್ಹ ಹವಾಮಾನ ಬದಲಾವಣೆ ಕಾಣಿಸುತ್ತಿಲ್ಲ ಎಂದು ತಿಳಿಸಿದೆ.
ಪೆನಿನ್ಸುಲರ್ ಇಂಡಿಯಾದಲ್ಲಿ ಮಳೆ:ದಕ್ಷಿಣ ಭಾರತವನ್ನು ಪೆನಿನ್ಸುಲರ್ ಇಂಡಿಯಾ ಎಂದು ಕರೆಯುತ್ತಾರೆ. ಇದು ಭಾರತದ ದಖ್ಖನ್ ಪ್ರಸ್ಥಭೂಮಿಯ ದಕ್ಷಿಣ ಭಾಗವಾಗಿದೆ. ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಜೊತೆಗೆ ಲಕ್ಷದ್ವೀಪ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳನ್ನೂ ಒಳಗೊಂಡಿದೆ.
ಕೇರಳದಲ್ಲಿ ಆರೆಂಜ್ ಅಲರ್ಟ್:ಕೇರಳದ ಮೂರು ಜಿಲ್ಲೆಗಳಾದ ಮಲಪ್ಪುರಂ, ಇಡುಕ್ಕಿ ಮತ್ತು ಪತ್ತನಂತಿಟ್ಟಿನಲ್ಲಿ ಭಾರಿ ಮಳೆಯಾಗಲಿದೆ. ಹೀಗಾಗಿ ಈ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. 115.6 ರಿಂದ 204.4 ಮಿಮೀ ವರೆಗೆ ಮಳೆಯಾಗಲಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಜನರಿಗೆ ಸೂಚಿಸಲಾಗಿದೆ.