ಡೆಹ್ರಾಡೂನ್: ಆದಾಯಕ್ಕೆ ಮೀರಿ ಆಸ್ತಿ ಸಂಪಾದನೆ ಆರೋಪದಡಿ ಐಎಎಸ್ ಅಧಿಕಾರಿ ರಾಮ್ ವಿಲಾಸ್ ಯಾದವ್ ಅವರನ್ನು ಬುಧವಾರ ವಿಚಾರಣೆ ನಡೆಸಿದ ನಂತರ ತಡರಾತ್ರಿ ರಾಜ್ಯ ವಿಜಿಲೆನ್ಸ್ ಇಲಾಖೆ ಬಂಧಿಸಿದೆ. ಹೈಕೋರ್ಟ್ ಆದೇಶದ ಮೇರೆಗೆ ರಾಮ್ ವಿಲಾಸ್ ಯಾದವ್ ಬುಧವಾರ ಮಧ್ಯಾಹ್ನ ತಮ್ಮ ವಕೀಲರೊಂದಿಗೆ ಖಾಸಗಿ ಕಾರಿನಲ್ಲಿ ಡೆಹರಾಡೂನ್‌ನ ವಿಜಿಲೆನ್ಸ್ ಕಚೇರಿಗೆ ಆಗಮಿಸಿದ್ದರು. ಅಲ್ಲಿ ಅವರನ್ನು ಸುಮಾರು 14 ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು ಎಂದು ರಾಜ್ಯ ವಿಜಿಲೆನ್ಸ್ ವಿಭಾಗದ ನಿರ್ದೇಶಕ ಅಮಿತ್ ಸಿನ್ಹಾ ತಿಳಿಸಿದ್ದಾರೆ.
14 ಗಂಟೆಗಳಲ್ಲಿ 70 ಪ್ರಶ್ನೆ: ಕಾಲ್ನಡಿಗೆಯಲ್ಲೇ ಪೊಲೀಸ್ ಭದ್ರತೆಯಲ್ಲಿ ವಿಜಿಲೆನ್ಸ್‌ನ ಮುಖ್ಯಗೇಟ್ನಿಂದ ಒಳಬಂದ ರಾಮ್ ವಿಲಾಸ್ ಮಾಧ್ಯಮಗಳ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೇ ಕಚೇರಿ ಒಳಗೆ ತೆರಳಿದರು. 14 ಗಂಟೆಗಳ ವಿಚಾರಣೆಯಲ್ಲಿ ಸುಮಾರು 70 ಪ್ರಶ್ನೆಗಳನ್ನು ರಾಮ್ ವಿಲಾಸ್ ಯಾದವ್ ಅವರಿಗೆ ಕೇಳಲಾಯಿತು. ವಿಜಿಲೆನ್ಸ್‌ನ ಒಬ್ಬರು ಎಸ್‌ಪಿ, ಇಬ್ಬರು ಉಪ ಎಸ್‌ಪಿಗಳು, ಆರು ಇನ್‌ಸ್ಪೆಕ್ಟರ್‌ಗಳು ಮತ್ತು ಒಬ್ಬರು ಜಂಟಿ ನಿರ್ದೇಶಕರು ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು.
ಸುದೀರ್ಘ ವಿಚಾರಣೆಯ ಸಮಯದಲ್ಲಿ ರಾಮ್ ವಿಲಾಸ್ ಯಾದವ್ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ರಕ್ಷಣಾ ವಕೀಲ ಅಭಿನವ್ ಶರ್ಮಾ ಆರೋಪಿಸಿದರು. ಇದಲ್ಲದೇ ತನಿಖಾ ಆದೇಶದಿಂದಾಗಿ ಉತ್ತರಾಖಂಡ ಸರ್ಕಾರವು ರಾಮ್ ವಿಲಾಸ್ ಯಾದವ್ ಅವರನ್ನು ಅಮಾನತುಗೊಳಿಸಿದೆ. ರಾಮ್ ವಿಲಾಸ್ ಯಾದವ್ ಬಂಧನಕ್ಕೆ ತಡೆಯಾಜ್ಞೆ ನೀಡಲು ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಬೇಕಿತ್ತು. ಆದರೆ, ಅದಕ್ಕೂ ಮೊದಲು ರಾಮ್ ವಿಲಾಸ್ ಅವರ ಬಂಧನ ಮಾಡಲಾಗಿದೆ. ಈ ಪ್ರಕರಣದಲ್ಲಿ ಅವರ ಮೇಲಿನ ಕಾನೂನು ಹಿಡಿತ ತೀವ್ರಗೊಂಡಿದೆ.
ಪ್ರಕರಣ ದಾಖಲಿಸಿದ ನಂತರ ಸರ್ಕಾರದಿಂದ ಅನುಮತಿ ಪಡೆದ ವಿಜಿಲೆನ್ಸ್ ತಂಡ, ಉತ್ತರಾಖಂಡದಿಂದ ಉತ್ತರ ಪ್ರದೇಶವೆರೆಗ ಇರುವ ಯಾದವ್ ಅವರ ಬೇನಾಮಿ ಆಸ್ತಿಗಳ ಮೇಲೆ ದಾಳಿ ನಡೆಸಿತು. ವಾಸ್ತವವಾಗಿ, ಐಎಎಸ್ ರಾಮ್ ವಿಲಾಸ್ ಯಾದವ್ ಅವರನ್ನು ಪ್ರಶ್ನಿಸಲು ವಿಜಿಲೆನ್ಸ್ ಬಹಳ ಸಮಯದಿಂದ ಒತ್ತಾಯಿಸುತ್ತಿತ್ತು. ಆದರೆ, ಯಾದವ್ ವಿಜಿಲೆನ್ಸ್ ಮುಂದೆ ವಿಚಾರಣೆಗೆ ಹಾಜರಾಗಿರಲಿಲ್ಲ. ಇಷ್ಟೇ ಅಲ್ಲ, ಯಾದವ್ ತಮ್ಮ ಬಂಧನಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ತನಿಖಾ ದಾಖಲೆಯ ಉತ್ತರಕ್ಕಾಗಿ ವಿಜಿಲೆನ್ಸ್ ಕಚೇರಿಗೆ ಹಾಜರಾಗುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ನಿನ್ನೆ ವಿಚಾರಣೆಗೆ ಹಾಜರಾಗಿದ್ದರು.