ಭಾಗಲ್ಪುರ(ಬಿಹಾರ):ಜಿಲ್ಲೆಯ ಸುಲ್ತಾನಪುರದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಪೋಷಕರು, ಒಡಹುಟ್ಟಿದವರು ಮುಂದೆ ನಿಂತು ತಮ್ಮ ಹೆಣ್ಣುಮಕ್ಕಳನ್ನು ಧಾರೆ ಎರೆದುಕೊಡುವುದನ್ನು ನೋಡಿದ್ದೇವೆ. ಆದ್ರೆ ಇಲ್ಲಿ ಗಂಡನೇ ತನ್ನ ಹೆಂಡತಿಯನ್ನು ಆಕೆ ಇಷ್ಟಪಟ್ಟ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾನೆ.
ಏಳು ವರ್ಷಗಳ ಹಿಂದೆ ಮದುವೆಯಾಗಿದ್ದರೂ, ಆಕೆ ಬೇರೆ ಯುವಕನನ್ನ ಪ್ರೀತಿಸುತ್ತಿದ್ದಳು. ಈ ಬಗ್ಗೆ ತಿಳಿದುಕೊಂಡ ಗಂಡನೇ ಪತ್ನಿಯನ್ನು ಖುದ್ದಾಗಿ ನಿಂತು ಬೇರೆ ಯುವಕನೊಂದಿಗೆ ಕಲ್ಯಾಣ ಕಾರ್ಯವನ್ನು ನೆರವೇರಿಸಿದ್ದಾನೆ.
ತಾನೇ ಮುಂದೆ ನಿಂತು ಪತ್ನಿಗೆ ಮದುವೆ ಮಾಡಿಸಿದ ಗಂಡ ಸಪ್ನಾ ಕುಮಾರಿ ಹಾಗೂ ಉತ್ತಮ್ ಮಂಡಲ್ ಕಳೆದ ಏಳು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಇದಾದ ಬಳಿಕ ಬೇರೆ ಯುವಕನೊಂದಿಗೆ ಸಪ್ನಾ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ. ಈ ವಿಷಯ ಗಂಡನಿಗೆ ಗೊತ್ತಾಗುತ್ತಿದ್ದಂತೆ ಅನೇಕ ಸಲ ಹೆಂಡತಿ ಜತೆ ಜಗಳವಾಡಿದ್ದಾನೆ. ಆದರೆ ಸಪ್ನಾ ಮಾತ್ರ ತಾನು ರಾಜು ಕುಮಾರ್ನನ್ನ ಪ್ರೀತಿಸುತ್ತಿದ್ದೇನೆ ಎಂದು ಹೇಳುತ್ತಿದ್ದಳು.
ಇದರಿಂದ ಆಕ್ರೋಶಗೊಂಡ ಉತ್ತಮ್, ಪತ್ನಿ ಕುಟುಂಬಸ್ಥರಿಗೆ ದೂರು ಸಹ ನೀಡಿದ್ದನು. ಆದರೂ ಹೆಂಡತಿ ಮಾತು ಕೇಳದಿದ್ದಾಗ ಖುದ್ದಾಗಿ ಆತನೇ ಈ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದಾನೆ. ಹೀಗಾಗಿ ಗಂಡನ ಸಮ್ಮುಖದಲ್ಲೇ ದೊಡ್ಡ ದುರ್ಗಾ ಸ್ಥಳದಲ್ಲಿ ಸಪ್ನಾ ಮತ್ತೊಮ್ಮೆ ಮದುವೆ ಮಾಡಿಕೊಂಡಿದ್ದಾಳೆ.
ಸಪ್ನಾಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಆದರೆ ಆಕೆ ಬೇರೆ ವ್ಯಕ್ತಿ ಜತೆ ಮದುವೆ ಮಾಡಿಕೊಂಡು ಆತನೊಂದಿಗೆ ಹೋಗಿರುವ ಕಾರಣ ಎರಡು ಮಕ್ಕಳು ತಂದೆ ಉತ್ತಮ್ ಜೊತೆ ಇರಲಿದ್ದಾರೆ.