ಮುಂಬೈ (ಮಹಾರಾಷ್ಟ್ರ): ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಗ್ಗೆ ಮಾಹಿತಿ ನೀಡಿದವರಿಗೆ 25 ಲಕ್ಷ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಘೋಷಿಸಿದೆ. ಈ ಮೂಲಕ ದಾವೂದ್ ಬಗ್ಗೆ ದೇಶದಲ್ಲಿ ಚರ್ಚೆ ಆರಂಭವಾಗಿದೆ.
ಹೌದು, ಪಾತಕಿ ದಾವೂದ್ 80ರ ದಶಕದಲ್ಲಿ ಅಪರಾಧ ಜಗತ್ತಿಗೆ ಪ್ರವೇಶಿಸಿದಾಗಿನಿಂದ ಯಾವಾಗಲೂ ಚರ್ಚೆ ಮತ್ತು ವಿವಾದಗಳ ಕೇಂದ್ರ ಬಿಂದುವಾಗಿದ್ದಾನೆ. ಏಳನೇ ತರಗತಿಗೆ ಶಾಲೆ ಬಿಟ್ಟ ನಂತರ ದಾವೂದ್ ಸಣ್ಣ- ಪುಟ್ಟ ಕಳ್ಳತನ, ಚೈನ್ ದೋಚುವುದು, ಜೇಬುಗಳ್ಳತನದಲ್ಲಿ ತೊಡಗಿಕೊಂಡೇ ಈಗ ಭೂಗತ ಪಾತಕಿಯಾಗಿದ್ದಾನೆ.
ದಾವೂದ್ ತಂದೆ ಇಬ್ರಾಹಿಂ ಕಸ್ಕರ್ ಮುಂಬೈ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಆಗಿದ್ದರು. ಡೋಂಗ್ರಿ ನಾಗ್ಪಾಡಾ ಪ್ರದೇಶದಲ್ಲಿ ಕಾನ್‌ಸ್ಟೇಬಲ್ ಆಗಿ ಇಬ್ರಾಹಿಂ ಕಸ್ಕರ್ ಹೆಸರು ಮಾಡಿದ್ದ ಗೌರವವನ್ನೂ ಹಿಂದಿದ್ದ. ಇಬ್ರಾಹಿಂ ಕಸ್ಕರ್ ಮತ್ತು ಅಮಿನಾ ಕಸ್ಕರ್ ದಂಪತಿಗೆ ಒಟ್ಟು ಹನ್ನೆರಡು ಮಕ್ಕಳು.
ದಾವೂದ್ 19ನೇ ವಯಸ್ಸಿನಲ್ಲೇ ತನ್ನ ಸಹೋದರ ಶಬ್ಬೀರ್ ಮತ್ತು ಆತನ ಸಹಚರರೊಂದಿಗೆ ಮುಂಬೈನ ಕಾರ್ನಾಕ್ ಬಂದರ್ ಪ್ರದೇಶದಲ್ಲಿ ಬ್ಯಾಂಕ್ ದರೋಡೆ ಮಾಡಿ ಅಪರಾಧ ಜಗತ್ತು ಮತ್ತು ಮುಂಬೈ ಪತ್ರಿಕೆಗಳ ಗಮನ ಸೆಳೆದಿದ್ದ. ಈ ಹಣ ಹಾಜಿ ಮಸ್ತಾನ್ ಸೇರಿದ್ದು ಎಂದು ಭಾವಿಸಿ ದಾವೂದ್ ಲೂಟಿ ಮಾಡಿದ್ದ. ಆದರೆ, ಆತ ಕದ್ದ ಹಣ ಮೆಟ್ರೋಪಾಲಿಟನ್ ಕೋ ಆಪರೇಟಿವ್ ಬ್ಯಾಂಕ್ಗೆ ಸೇರಿತ್ತು. ಇದು ಆ ದಶಕದಲ್ಲಿ ಮುಂಬೈನಲ್ಲಿ ನಡೆದ ಅತಿ ದೊಡ್ಡ ದರೋಡೆ ಆಗಿತ್ತು.
11ನೇ ವಯಸ್ಸಿಗೆ ಅಪರಾಧಗಳಲ್ಲಿ ಭಾಗಿ:ದಾವೂದ್ 11ನೇ ವಯಸ್ಸಿನಿಂದಲೇ ಜನರ ಸರಗಳ ದೋಚುವುದು, ಜೇಬುಗಳ್ಳತನ ಮತ್ತು ಜನರನ್ನು ಥಳಿಸಲು ಆರಂಭಿಸಿದ್ದ. 20ನೇ ವಯಸ್ಸಿನ ವೇಳೆಗೆ ಪಠಾಣ್ ಗ್ಯಾಂಗ್‌ಗಳಿಗೆ ಸವಾಲು ಹಾಕಲು ಪ್ರಾರಂಭಿಸಿ ಡೋಂಗ್ರಿ ಪ್ರದೇಶದಲ್ಲಿ ಮಕ್ಕಳ ತಂಡ ರಚಿಸಿದ್ದ. ಅಲ್ಲಿಂದ ಮುಂಬೈಯಲ್ಲಿ ಡಾನ್ ಪಟ್ಟ ಪಡೆದು ಬಳಿಕ ದೇಶಾದ್ಯಂತ ಹೆಸರು ಪಡೆದ.
ಜೊತೆಗೆ ದಾವೂದ್ ತನ್ನ ಸಹೋದರ ಶಬ್ಬೀರ್‌ನೊಂದಿಗೆ ಸೇರಿ ತನ್ನದೇ ಆದ ಗ್ಯಾಂಗ್ ಚಟುವಟಿಕೆಗಳನ್ನು ತೊಡಗಿದ್ದ. ದಾವೂದ್‌ನ ಈ ಗ್ಯಾಂಗ್ಗೆ ಡಿ ಕಂಪನಿ ಎಂದು ಕರೆಯಲು ಆರಂಭಿಸಲಾಯಿತು. ಅಲ್ಲದೇ, ದಾವೂದ್ ಸಹೋದರ ಅನಿಸ್ ಈ ಕಂಪನಿಯ ಎಲ್ಲ ವ್ಯವಹಾರಗಳನ್ನು ಈಗ ನಿರ್ವಹಿಸುತ್ತಿದ್ದಾನೆ ಎಂದು ವರದಿಯಾಗಿದೆ.
ಹಿರಿಯ ಪತ್ರಕರ್ತ ಎಸ್.ಹುಸೇನ್ ಜೈದಿ ದಾವೂದ್ ಇಬ್ರಾಹಿಂ ಬಗ್ಗೆ ಪುಸ್ತಕ ಬರೆದಿದ್ದಾರೆ. ತಮ್ಮ ಪುಸ್ತಕದಲ್ಲಿ ಡೋಂಗ್ರಿ ಟು ದುಬೈ ಎಂದು ವಿವರಿಸುತ್ತಾ, ಇಬ್ರಾಹಿಂ ತನ್ನದೇ ಆದ ಸ್ನೇಹಿತರು ಮತ್ತು ಹಿತೈಷಿಗಳ ಜಾಲವನ್ನು ಹೊಂದಿದ್ದ ಎಂದು ಬರೆಯುತ್ತಾರೆ. ದಾವೂದ್‌ನ ಇಂತಹ ಚಟುವಟಿಕೆಗಳನ್ನು ಕಂಡು ಸ್ವತಃ ತಂದೆ ಇಬ್ರಾಹಿಂ ಥಳಿಸಿದ್ದರು ಎಂದು ಉಲ್ಲೇಖಿಸಲಾಗಿದೆ.
ಪೊಲೀಸರ ಮುಂದೆ ಕ್ಷಮೆ ಕೋರಿಸಿದ್ದ ತಂದೆ: ಒಂದು ದಿನ ದಾವೂದ್ ಮನೆ ಬಂದಿದ್ದ. ಈ ವೇಳೆ ತಾಯಿ ಅಮಿನಾ ಆಹಾರ ಮತ್ತು ನೀರು ಕೊಡಲು ಮುಂದಾಗಿದ್ದರು. ಆದರೆ, ತಂದೆ ಇಬ್ರಾಹಿಂ ಮಗ ದಾವೂದ್ ಹಾಗೂ ಶಬ್ಬೀರ್ನನ್ನು ಮನೆಯಿಂದ ಹೊರದಬ್ಬಿ, ಪೊಲೀಸ್ ಕ್ರೈಂ ಬ್ರಾಂಚ್ಗೆ ಕರೆತಂದಿದ್ದರು. ಅಲ್ಲಿ ಅಧಿಕಾರಿಗಳ ಕಾಲಿಗೆ ಬಿದ್ದು ಕ್ಷಮೆ ಕೋರಿವಂತೆ ಮಾಡಿದ್ದರು. ಅಲ್ಲದೇ, ಮಕ್ಕಳು ಮಾಡಿದ ನಾಚಿಕೆಗೇಡಿನ ಕೃತ್ಯಕ್ಕೆ ತಂದೆ ಅಧಿಕಾರಿಗಳ ತಾವು ಕೂಡ ಕ್ಷಮೆಯಾಚಿಸಿದ್ದರು. ಆಗ ಅಧಿಕಾರಿಗಳು ಅವರಿಗೆ ವಿನಾಯಿತಿ ನೀಡಿದ್ದರು ಎಂಬ ಮಾತುಗಳು ಇವೆ.
ಆದರೆ, ದಾವೂದ್ ಇಬ್ರಾಹಿಂ ಬದಲಾಗಿರಲಿಲ್ಲ. ಭೂಗತ ಲೋಕಕ್ಕೆ ಪ್ರವೇಶಿಸಿ ಮತ್ತು ಗ್ಯಾಂಗ್ ವಾರ್‌ಗಳು ಮತ್ತು ರಕ್ತಪಾತದಲ್ಲಿ ತೊಡಗಿಕೊಂಡಿದ್ದ. ಪಾತಕಿ ದಾವೂದ್ ಇಬ್ರಾಹಿಂ ಮೇಲೆ ಮುಂಬೈನಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಿವೆ. ದಾವೂದ್ ಮುಂಬೈನಿಂದ ಹೊರಗಿದ್ದರೂ ಸುಲಿಗೆ, ಚಿನ್ನ ಕಳ್ಳಸಾಗಣೆ, ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್: ದಾವೂದ್ ಇಬ್ರಾಹಿಂ 1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಕೂಡ ಆಗಿದ್ದ. ಆ ಬಳಿಕ ಮುಂಬೈನಲ್ಲಿ ನಡೆದ ಸರಣಿ ಸ್ಫೋಟದಲ್ಲಿ ದಾವೂದ್ ಇಬ್ರಾಹಿಂ ಕೈವಾಡವೂ ಪತ್ತೆಯಾಗಿತ್ತು. ಮುಂಬೈ ಹಾಗೂ ಭಾರತದ ಹಲವು ಭಯೋತ್ಪಾದನಾ ಚಟುವಟಿಕೆಗಳಲ್ಲಿ ದಾವೂದ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ ಎಂಬ ಮಾಹಿತಿ ತನಿಖಾ ಸಂಸ್ಥೆಗೆ ಇದೆ.
ಭೂಗತ ಪಾತಕಿ ದಾವೂದ್ ಕಳೆದ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದಾನೆ ಎಂದು ಘೋಷಿಸಲಾಗಿದೆ. ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಕೇಂದ್ರ ಗೃಹ ಸಚಿವಾಲಯವು ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಎಲ್ಲ ತನಿಖೆಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಿದೆ. ಆ ಬಳಿಕ ದಾವೂದ್ ಇಬ್ರಾಹಿಂ ವಿರುದ್ಧ ಎನ್‌ಐಎ ಭಯೋತ್ಪಾದನಾ ಚಟುವಟಿಕೆಗಳಡಿ ಪ್ರಕರಣ ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಮುಂಬೈನ 13 ಸ್ಥಳಗಳಲ್ಲಿ ಏಜೆನ್ಸಿಗಳು ದಾಳಿ ನಡೆಸಿದ್ದವು. ಆ ದಾಳಿಯ ವೇಳೆ ತನಿಖಾ ಸಂಸ್ಥೆಗೆ ಕೆಲವು ಮಹತ್ವದ ಸಾಕ್ಷ್ಯಗಳೂ ಸಿಕ್ಕಿವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ದಾವೂದ್ ಇಬ್ರಾಹಿಂ ಮಾಹಿತಿ ಕೊಟ್ಟವರಿಗೆ ₹25 ಲಕ್ಷ ಬಹುಮಾನ ಪ್ರಕಟಿಸಿದ ಎನ್‌ಐಎ