ನವದೆಹಲಿ: 2002ರ ಗುಜರಾತ್ ಗಲಭೆಗಳಿಗೆ ಸಂಬಂಧಿಸಿದಂತೆ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಇತರರಿಗೆ ಎಸ್ಐಟಿ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದ ಕ್ರಮಕ್ಕೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದು, ಸತ್ಯವು ಚಿನ್ನದ ಹೊಳಪಿನಂತೆ ಪುಟಿದೆದ್ದು ಬಂದಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕಳೆದ 19 ವರ್ಷಗಳ ಕಾಲ ಈ ಬಗ್ಗೆ ಒಂದೇ ಒಂದು ಮಾತನ್ನೂ ಆಡದೇ, ಭಗವಾನ್ ಶಿವನು ಎಲ್ಲ ವಿಷವನ್ನು ತನ್ನ ಗಂಟಲಲ್ಲಿ ಇಟ್ಟುಕೊಂಡಂತೆ ಎಲ್ಲ ನೋವನ್ನೂ ನುಂಗಿಕೊಂಡಿದ್ದಾರೆ ಎಂದು ಅಮಿತ್ ಶಾ ನುಡಿದಿದ್ದಾರೆ.
ಎಎನ್ಐ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶಾ, ರಾಜಕೀಯ ನಾಯಕನೊಬ್ಬ ಸಂವಿಧಾನಕ್ಕೆ ಅನುಗುಣವಾಗಿ ಹೇಗೆ ವರ್ತಿಸಬೇಕೆಂಬ ಬಗ್ಗೆ ಎಲ್ಲ ರಾಜಕೀಯ ವ್ಯಕ್ತಿಗಳಿಗೆ ನರೇಂದ್ರ ಮೋದಿ ಮಾದರಿಯಾಗಿದ್ದಾರೆ ಎಂದು ಹೇಳಿದರು.
2002 ರಲ್ಲಿ ನಡೆದ ಗುಜರಾತ್ ದಂಗೆಯ ಪ್ರಕರಣದಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಇತರರಿಗೆ ಎಸ್ಐಟಿ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ, ಮಾಜಿ ಕಾಂಗ್ರೆಸ್ ಸಂಸದ ದಿವಂಗತ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾ ಮಾಡಿದೆ.
ಆಗ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ವಿರುದ್ಧ ರಾಜಕೀಯ ಪ್ರೇರಿತರಾಗಿ ಆರೋಪಗಳನ್ನು ಮಾಡಿದವರು ಕನಿಷ್ಠ ಈಗಲಾದರೂ ಕ್ಷಮೆ ಕೇಳಬೇಕೆಂದು ಅಮಿತ ಶಾ ಆಗ್ರಹಿಸಿದರು.
ಸಂವಿಧಾನಕ್ಕೆ ಗೌರವ ನೀಡಬೇಕು:ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವನ್ನು ಹೇಗೆ ಗೌರವಿಸಬೇಕು ಎಂಬ ಬಗ್ಗೆ ನರೇಂದ್ರ ಮೋದಿ ಇತರ ನಾಯಕರಿಗೆ ಮಾದರಿಯಾಗಿದ್ದಾರೆ. ಮೋದಿಯವರನ್ನು ಸಹ ಆಗ ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ, ಆಗ ಯಾರೂ ಪ್ರತಿಭಟನೆ ಮಾಡಲಿಲ್ಲ. ದೇಶಾದ್ಯಂತ ಇರುವ ಕಾರ್ಯಕರ್ತರು ಮೋದಿ ಪರವಾಗಿ ಬೀದಿಗಿಳಿಯಲಿಲ್ಲ. ನಾವು ಕಾನೂನಿಗೆ ಸಹಕಾರ ನೀಡಿದೆವು. ಆಗ ನನ್ನನ್ನು ಕೂಡ ಅರೆಸ್ಟ್ ಮಾಡಲಾಗಿತ್ತು.
ನಾವ್ಯಾರೂ ಇದರ ವಿರುದ್ಧ ಪ್ರತಿಭಟಿಸಲಿಲ್ಲ. ಕೊನೆಗೂ ಇಷ್ಟು ಸುದೀರ್ಘಾವಧಿಯ ಹೋರಾಟದ ನಂತರ ಗೆಲುವು ಲಭಿಸಿದ್ದು, ಸತ್ಯ ಚಿನ್ನದ ಹೊಳಪಿನಂತೆ ಪುಟಿದೆದ್ದು ಹೊರಬಂದಿದೆ. ಮೋದಿಯವರ ವಿರುದ್ಧ ಆರೋಪ ಮಾಡಿದವರಿಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದಲ್ಲಿ ಅವರೆಲ್ಲರೂ ಈಗ ಮೋದಿಜಿ ಹಾಗೂ ಬಿಜೆಪಿಯ ಕ್ಷಮೆ ಕೇಳಬೇಕು ಎಂದು ಸಚಿವ ಅಮಿತ್ ಶಾ ಸ್ಪಷ್ಟ ನುಡಿಗಳಲ್ಲಿ ಹೇಳಿದರು.
ತೀಸ್ತಾ ಸೆತಲ್ವಾಡ್ ವಿರುದ್ಧ ಶಾ ಅಸಮಾಧಾನ:ಸುಪ್ರೀಂಕೋರ್ಟ್ ತೀರ್ಪನ್ನು ನಾನು ಓದಿದ್ದೇನೆ. ಅದರಲ್ಲಿ ತೀಸ್ತಾ ಸೆತಲ್ವಾಡ್ ಹೆಸರನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಆಕೆ ನಡೆಸುತ್ತಿದ್ದ ಎನ್ಜಿಓ ಪೊಲೀಸರಿಗೆ ಆಧಾರರಹಿತ ಮಾಹಿತಿಗಳನ್ನು ನೀಡಿತ್ತು ಎಂದು ಅವರು ಹೇಳಿದರು.
ಇಲ್ಲ.. ಅವರ ಕುತಂತ್ರವು 20 ವರ್ಷಗಳ ಕಾಲ ನಡೆಯಲಿಲ್ಲ. ಜನತೆಯ ತೀರ್ಪೇ ಎಲ್ಲಕ್ಕಿಂತ ಸರ್ವೋಚ್ಚ. ಜನ ಎಲ್ಲವನ್ನೂ ನೋಡುತ್ತಾರೆ. ದೇಶದ 130 ಕೋಟಿ ಜನ 260 ಕೋಟಿ ಕಣ್ಣು, 260 ಕೋಟಿ ಕಿವಿಗಳನ್ನು ಹೊಂದಿದ್ದಾರೆ. ನಾವು ಗುಜರಾತಿನಲ್ಲಿ ಯಾವತ್ತೂ ಸೋತಿಲ್ಲ. ಅಂದರೆ ಜನತೆ ಇವರ ಆರೋಪಗಳನ್ನು ಯಾವತ್ತೂ ಒಪ್ಪಿಕೊಂಡಿಲ್ಲ ಎಂದು ಶಾ ಮಾರ್ಮಿಕವಾಗಿ ಹೇಳಿದರು.
ಸರ್ಕಾರ ನಿರ್ಲಕ್ಷ್ಯ ಮಾಡಿರಲಿಲ್ಲ:ಗುಜರಾತ್ ಗಲಭೆಯ ಸಂದರ್ಭಗಳಲ್ಲಿ ಆಗಿನ ಸರ್ಕಾರ ಯಾವುದೇ ನಿರ್ಲಕ್ಷ್ಯ ತೋರಿಲ್ಲ. ಗುಜರಾತ್ ಬಂದ್ ಕರೆ ಕೊಟ್ಟಾಗ ನಾವು ಆರ್ಮಿ ಕರೆಸಿದ್ದೆವು. ಆರ್ಮಿ ರಾಜ್ಯಕ್ಕೆ ಬರಲು ಕೊಂಚ ಸಮಯ ಬೇಕಿತ್ತು. ಸೂಕ್ತ ಕ್ರಮ ಕೈಗೊಳ್ಳಲು ಒಂದೇ ಒಂದು ದಿನವೂ ನಾವು ತಡ ಮಾಡಿಲ್ಲ. ಆಗಿನ ನರೇಂದ್ರ ಮೋದಿ ಸರ್ಕಾರದ ಕ್ರಮಗಳನ್ನು ಸುಪ್ರೀಂಕೋರ್ಟ್ ಸಹ ಮುಕ್ತಕಂಠದಿಂದ ಶ್ಲಾಘಿಸಿದೆ ಎಂದು ಶಾ ಸಮರ್ಥಿಸಿಕೊಂಡರು.