ಶ್ರೀನಗರ(ಜಮ್ಮು ಕಾಶ್ಮೀರ):ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಶರಣಾಗಲು ನಿರಾಕರಿಸಿದ ಭಯೋತ್ಪಾದಕನನ್ನು ಭದ್ರತಾ ಪಡೆಯ ಸಿಬ್ಬಂದಿ ಹೊಡೆದುರುಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗುಂಡಿನ ಚಕಮಕಿ ನಡೆದಿದೆ. ಶಿರ್ಮಲ್ ಪ್ರದೇಶದ ತೋಟಗಳಲ್ಲಿ ಭಯೋತ್ಪಾದಕರು ಅಡಗಿರುವ ನಿಖರ ಮಾಹಿತಿ ಸಂಗ್ರಹಿಸಿದ ಪೊಲೀಸರು, ಸೇನೆ ಮತ್ತು ಸಿಆರ್ಪಿಎಫ್ನೊಂದಿಗೆ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು.
ಕಾರ್ಯಾಚರಣೆಯ ಸಮಯದಲ್ಲಿ ಭಯೋತ್ಪಾದಕರಿಗೆ ಶರಣಾಗಲು ಅವಕಾಶ ನೀಡಲಾಗಿತ್ತು. ಇದನ್ನು ನಿರಾಕರಿಸಿದ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರೂ ಗುಂಡು ಹಾರಿಸಿದ್ದು, ಓರ್ವ ಉಗ್ರನನ್ನು ಕೊಂದು ಹಾಕಿದ್ದಾರೆ.
ಎನ್ಕೌಂಟರ್ ಸ್ಥಳದಿಂದ ಉಗ್ರನ ಮೃತದೇಹವನ್ನು ಸಾಗಿಸಲಾಗಿದೆ. ಆತನನ್ನು ಬದಿಗಂ ಐಶ್ಮುಕ್ವಾಂ ಅನಂತನಾಗ್ ನಿವಾಸಿ ಗುಲಾಮ್ ಖಾದಿರ್ ಭಟ್ ಅವರ ಪುತ್ರ ಸಜಾದ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಈತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಜೊತೆ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ದೊರೆತಿದೆ.
ಇದನ್ನೂ ಓದಿ:ಸಮಾಜದಲ್ಲಿ ಗೌರವ ಸಿಗದಿರುವುದೇ ದಲಿತರು ಕ್ರೈಸ್ತಮತ ಸೇರಲು ಕಾರಣ: ತೆಲಂಗಾಣ ಸಿಎಂ
ದಾಖಲೆಗಳ ಪ್ರಕಾರ, ಹತ್ಯೆಗೀಡಾದ ಭಯೋತ್ಪಾದಕ ಸಜಾದ್ ಅಹ್ಮದ್ ಭಟ್ 2020ರಿಂದ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದು, ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಎನ್ಕೌಂಟರ್ ನಡೆದ ಸ್ಥಳದಿಂದ ಒಂದು ಪಿಸ್ತೂಲ್, ಒಂದು ಗ್ರೆನೇಡ್ ಮತ್ತು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಥಳದಲ್ಲಿ ಶೋಧ ಕಾರ್ಯ ಚುರುಕುಗೊಳಿಸಲಾಗಿದೆ.