ಕರ್ನಾಟಕ

karnataka

ETV Bharat / bharat

NEET ಪರೀಕ್ಷೆ ವೇಳೆ ಕೆಲವೆಡೆ ಹಿಜಾಬ್​ ವಿವಾದ: ಕೇರಳದಲ್ಲಿ ವಿದ್ಯಾರ್ಥಿನಿಯರ ಒಳ ಉಡುಪು ತೆಗೆಸಿದ ಗಂಭೀರ ಆರೋಪ - ಮಹಾರಾಷ್ಟ್ರದಲ್ಲಿ ಹಿಜಾಬ್​ ಗಲಾಟೆ

ರಾಜಸ್ಥಾನ, ಮಹಾರಾಷ್ಟ್ರದಲ್ಲಿ ನೀಟ್​ ಪರೀಕ್ಷೆಗೆ ಹಿಜಾಬ್​ ಧರಿಸಿ ಬಂದ ವಿದ್ಯಾರ್ಥಿಗಳು ಸಿಬ್ಬಂದಿ ಜೊತೆ ಕ್ಯಾತೆ ತೆಗೆದ ಘಟನೆ ನಡೆದರೆ, ಕೇರಳದಲ್ಲಿ ಕೊಲ್ಲಂನಲ್ಲಿ ತಪಾಸಣೆಯ ವೇಳೆ ವಿದ್ಯಾರ್ಥಿನಿಯರ ಒಳಉಡುಪು ತೆಗೆಸಿದ ಗಂಭೀರ ಆರೋಪ ಕೇಳಿಬಂದಿದೆ.

NEET ಪರೀಕ್ಷೆ
NEET ಪರೀಕ್ಷೆ

By

Published : Jul 18, 2022, 3:49 PM IST

Updated : Jul 18, 2022, 7:15 PM IST

ಕೋಟಾ/ ತಿರುವನಂತಪುರ/ ಮುಂಬೈ​:ಶಾಲಾ ಕಾಲೇಜುಗಳಲ್ಲಿ ವಿವಾದ ಸೃಷ್ಟಿಸಿದ್ದ 'ಹಿಜಾಬ್​' ಇದೀಗ ನೀಟ್​ ಪರೀಕ್ಷೆಯಲ್ಲೂ ಸದ್ದು ಮಾಡಿದೆ. ನಿನ್ನೆ ನಡೆದ ನೀಟ್​ ಪರೀಕ್ಷೆಯಲ್ಲಿ ರಾಜಸ್ಥಾನ, ಮಹಾರಾಷ್ಟ್ರದಲ್ಲಿ ಹಿಜಾಬ್​ ಧರಿಸಿ ಬಂದು ಪೊಲೀಸ್​ ಮತ್ತು ಪರೀಕ್ಷಾ ವೀಕ್ಷಕರ ಜೊತೆ ವಾಗ್ವಾದ ನಡೆಸಿದ್ದಾರೆ. ಕೇರಳದಲ್ಲಿ ಪರೀಕ್ಷೆಗೆ ಹಾಜರಾಗುವ ಮುನ್ನ ನಡೆದ ತಪಾಸಣೆಯಲ್ಲಿ ವಿದ್ಯಾರ್ಥಿನಿಯರಿಗೆ ಒಳಉಡುಪು ತೆಗೆಸಿದ ಗಂಭೀರ ಆರೋಪವೂ ಕೇಳಿಬಂದಿದೆ.

ರಾಜಸ್ಥಾನದ ಕೋಟಾ ಜಿಲ್ಲೆಯ ಮೋದಿ ಕಾಲೇಜಿನಲ್ಲಿ ನಿನ್ನೆ ನಡೆದ ನೀಟ್​ ಪರೀಕ್ಷೆಯ ವೇಳೆ ನಾಲ್ವರು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್​ ಧರಿಸಿ ಬಂದಿದ್ದಾರೆ. ಇದನ್ನು ಕಂಡ ಪೊಲೀಸ್​ ಹಿಜಾಬ್ ಕಳಚಿ ಪರೀಕ್ಷೆಗೆ ಹೋಗಲು ಸೂಚಿಸಿದ್ದಾರೆ.

ಆದರೆ, ಇದಕ್ಕೆ ಕ್ಯಾತೆ ತೆಗೆದ ವಿದ್ಯಾರ್ಥಿನಿಯರು ಹಿಜಾಬ್​ ಧರಿಸಿಯೇ ಪರೀಕ್ಷೆ ಬರೆಯಲು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಒಪ್ಪದ ಪರೀಕ್ಷಾ ಮೇಲ್ವಿಚಾರಕರು ನಿಯಮದ ಪ್ರಕಾರ ವಿದ್ಯಾರ್ಥಿಗಳು ಕಿವಿಯೋಲೆ, ವಾಚ್​, ತಾಳಿ ಇನ್ನಿತರೆ ಯಾವುದೇ ಹೆಚ್ಚಿನ ಬಟ್ಟೆಗಳನ್ನು ಧರಿಸಿ ಬರುವಂತಿಲ್ಲ ಎಂದು ತಿಳಿ ಹೇಳಿದರೂ ಪಟ್ಟು ಬಿಡದೇ ವಿದ್ಯಾರ್ಥಿನಿಯರು ವಾದಿಸಿದ್ದಾರೆ.

ಬಳಿಕ ಪರೀಕ್ಷಾ ಮೇಲ್ವಿಚಾರಕರು ವಿದ್ಯಾರ್ಥಿನಿಯರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಪರೀಕ್ಷೆಯ ಮುಂದಿನ ಯಾವುದೇ ನಿರ್ಧಾರಕ್ಕೆ ನಾನೇ ಜವಾಬ್ದಾರರು ಎಂದು ವಿದ್ಯಾರ್ಥಿನಿಯರು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಬಳಿಕ ನಿಯಮ ಮೀರಿ ಹಿಜಾಬ್​ ಧರಿಸಿ ಪರೀಕ್ಷೆ ಬರೆದಿದ್ದಾರೆ.

ಮಹಾರಾಷ್ಟ್ರದಲ್ಲಿ ದೂರು ದಾಖಲು:ಅದೇ ರೀತಿ ಮಹಾರಾಷ್ಟ್ರದಲ್ಲಿ ಹಿಜಾಬ್​ ಧರಿಸಿ ಬಂದ ವಿದ್ಯಾರ್ಥಿನಿಯರಿಗೂ ಪರೀಕ್ಷಾ ಕೇಂದ್ರದ ಒಳಹೋಗಲು ಆಕ್ಷೇಪ ವ್ಯಕ್ತವಾಗಿದೆ. ಹಿಜಾಬ್​ ಕಳಚಿಡಲು ವಿದ್ಯಾರ್ಥಿಗಳು ಒಪ್ಪದಿದ್ದಾಗ ಪರೀಕ್ಷಾ ಕೇಂದ್ರದಲ್ಲಿ ಗೊಂದಲ ಉಂಟಾಗಿದೆ. ಈ ವೇಳೆ ನಡೆದ ವಾಗ್ವಾದದಲ್ಲಿ ಹಿಜಾಬ್​ ತೆಗೆಯದಿದ್ದರೆ ಕತ್ತರಿಯಿಂದ ಕಟ್ ಮಾಡಲಾಗುವುದು ಎಂದು ಪೊಲೀಸರು ಬೆದರಿಕೆ ಹಾಕಿದ್ದಾರೆ ಎಂದು ಮಹಾರಾಷ್ಟ್ರದ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಈ ಬಗ್ಗೆ ವಾಶಿಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಒಳಉಡುಪು ತೆಗೆಸಿದ ಆರೋಪ:ಇನ್ನು ಕೇರಳದ ಕೊಲ್ಲಂ ಜಿಲ್ಲೆಯ ​ಕಾಲೇಜಿನಲ್ಲಿ ನೀಟ್​ ಪರೀಕ್ಷೆಗೆ ಹಾಜರಾಗುವ ಮುನ್ನ ನಡೆದ ತಪಾಸಣೆಯ ವೇಳೆ ಒಳ ಉಡುಪುಗಳನ್ನು ತೆಗೆಸಿದ ಗಂಭೀರ ಆರೋಪ ಕೇಳಿಬಂದಿದೆ.

ಈ ಬಗ್ಗೆ ವಿದ್ಯಾರ್ಥಿನಿಯರು ಪೊಲೀಸರಿಗೆ ದೂರು ನೀಡಿದ್ದಾರೆ. ಪರೀಕ್ಷಾ ಕೇಂದ್ರ ಒಳ ಪ್ರವೇಶಿಸುವ ಮುನ್ನ ನಡೆದ ತಪಾಸಣೆಯಲ್ಲಿ ಮಹಿಳಾ ಸಿಬ್ಬಂದಿ ಒಳಉಡುಪನ್ನು ತೆಗೆದಿಡಲು ಸೂಚಿಸಿದರು. ಇಲ್ಲವಾದಲ್ಲಿ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು ಎಂದು ದೂರಿನಲ್ಲಿ ಹೇಳಲಾಗಿದೆ.

ವಿದ್ಯಾರ್ಥಿನಿಯರ ಒಳ ಉಡುಪುಗಳನ್ನು ಒಂದು ಪೆಟ್ಟಿಗೆಯಲ್ಲಿ ಎಸೆದಿರುವುದು ಕಂಡು ಬಂದಿದೆ. ಈ ಕ್ರಮದಿಂದಾಗಿ ಪರೀಕ್ಷೆ ಬರೆಯಲು ಕಿರಿಕಿರಿ ಉಂಟಾಯಿತು. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಪರೀಕ್ಷೆ ಬರೆದ ವಿದ್ಯಾರ್ಥಿನಿ ದೂರು ನೀಡಿದ್ದಾರೆ.

ಓದಿ:ಪಾರ್ಸಿ ಜನಸಂಖ್ಯೆ ಹೆಚ್ಚಿಸಲು ಸರ್ಕಾರದ ಯತ್ನ: ಡೇಟಿಂಗ್, ವಿವಾಹ ಸಮಾಲೋಚನೆಗೆ ಒತ್ತು

Last Updated : Jul 18, 2022, 7:15 PM IST

ABOUT THE AUTHOR

...view details