ಹೈದರಾಬಾದ್: ಟಿಆರ್‌ಎಸ್ ಶಾಸಕರಿಗೆ ಆಮಿಷವೊಡ್ಡಿರುವ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ವಿಚಾರವಾಗಿ ತೆಲಂಗಾಣ ಹೈಕೋರ್ಟ್‌ನಲ್ಲಿ ಬುಧವಾರ ಬಿಸಿಬಿಸಿ ವಾದಗಳು ಮುಂದುವರಿದವು. ಆರೋಪಿಗಳಾದ ರಾಮಚಂದ್ರ ಭಾರತಿ, ನಂದಕುಮಾರ್, ಬಿಜೆಪಿ ಪರವಾಗಿ ಸಿಂಹಯಾಜಿ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ. ಪ್ರೇಮೇಂದ್ರ ರೆಡ್ಡಿ ಅವರು ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಬಿ.ವಿಜಯಸೇನ್ ರೆಡ್ಡಿ ಅವರು ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು.
ಸರ್ಕಾರದ ಪರ ಹಿರಿಯ ವಕೀಲ ದುಶ್ಯಂತ್ ದವೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖಾ ವರದಿಯನ್ನು ಮುಂದಿರಿಸಿ ವಾದ ಮಂಡಿಸಿದರು. ಆರೋಪಿಗಳ ಪರವಾಗಿ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ವಾದ ಮಂಡಿಸಿದರು. ರಾಜ್ಯ ಸರ್ಕಾರವನ್ನು ಉರುಳಿಸುವ ಷಡ್ಯಂತ್ರವಿದೆ ಎಂದು ದವೆ ಹೇಳಿದರು. ಇದಕ್ಕೆ ಆರೋಪಿಗಳ ಪರ ವಕೀಲರು 104 ಶಾಸಕರ ಬಹುಮತವಿರುವಾಗ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಪ್ರಾದೇಶಿಕ ಪಕ್ಷಗಳನ್ನು ನಾಶಪಡಿಸುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ದವೆ ಹೇಳಿದರು. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದೆ ಎಂದ ಅವರು "ಪ್ರಾದೇಶಿಕ ಪಕ್ಷಗಳನ್ನು ಗುರಿಯಾಗಿಸಿಕೊಂಡು ಅವು ಅಸ್ತಿತ್ವದಲ್ಲಿಲ್ಲದಂತೆ ಮಾಡುತ್ತಾರೆ" ಎಂದು ಹೇಳಿದರು. “ನಾವು ರಾಜ್ಯಗಳ ಒಕ್ಕೂಟ. ರಾಷ್ಟ್ರೀಯ ಪಕ್ಷದ ಜತೆಗೆ ಪ್ರಾದೇಶಿಕ ಪಕ್ಷಗಳೂ ಇವೆ. ಅವರಿಗೆ ಅವರ ಹಕ್ಕುಗಳಿವೆ. ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಪ್ರಾದೇಶಿಕ ಪಕ್ಷಗಳು ಹೋರಾಡುತ್ತವೆ. ಪ್ರಾದೇಶಿಕ ಪಕ್ಷಗಳ ವಿಘಟನೆ ಒಕ್ಕೂಟ ವ್ಯವಸ್ಥೆಗೆ ಮಾಡಿದ ಅವಮಾನ'' ಎಂದರು.