ನವದೆಹಲಿ: ಶ್ರದ್ಧಾ ವಾಲ್ಕರ್ ಹತ್ಯಾಕಾಂಡದ ಆರೋಪಿ ಅಫ್ತಾಬ್ ಪೂನಾವಾಲಾ ಈತನ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ. ಪೊಲೀಸರ ಮನವಿಯ ಮೇರೆಗೆ ಸಾಕೇತ್ ನ್ಯಾಯಾಲಯವು ವಿಚಾರಣೆಯನ್ನು ಶನಿವಾರ ಬೆಳಗ್ಗೆ 10 ಗಂಟೆಗೆ ಮುಂದೂಡಿದೆ. ಇದೀಗ ಜಾಮೀನು ಅರ್ಜಿಯ ವಿಚಾರಣೆ ಶನಿವಾರ ನಡೆಯಲಿದೆ.
ಇದಕ್ಕೂ ಮುನ್ನ ಆರೋಪಿ ಅಫ್ತಾಬ್ ಪೂನಾವಾಲಾ ಪರ ವಕೀಲ ಎಂ.ಎಸ್. ಖಾನ್ ಜಾಮೀನು ಕೋರಿ ಸಾಕೇತ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇಂದು ಬೆಳಗ್ಗೆ 10 ಗಂಟೆಗೆ ವಿಚಾರಣೆ ನಡೆಯಬೇಕಿತ್ತು. ಆರೋಪಿ ಪರ ವಕೀಲರು ಅಫ್ತಾಬ್‌ಗೆ ಜಾಮೀನು ಸಿಗುವ ಭರವಸೆ ವ್ಯಕ್ತಪಡಿಸಿದ್ದರು.
ಅಫ್ತಾಬ್ ಪರ ವಕೀಲ ಎಂ.ಎಸ್. ಖಾನ್ ಅವರು ದೆಹಲಿ ಪೊಲೀಸರ ಕಾರ್ಯಶೈಲಿಯನ್ನು ಸಹ ಪ್ರಶ್ನಿಸಿದ್ದು, ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಬರಲಿದೆ, ನಂತರ ದೆಹಲಿ ಪೊಲೀಸರ ಕಾಲ ಕೆಳಗಿನ ಭೂಮಿ ಕುಸಿಯಲಿದೆ ಎಂದು ಹೇಳಿದ್ದಾರೆ. ದೆಹಲಿ ಪೊಲೀಸರು ಪ್ರಸ್ತುತಪಡಿಸುತ್ತಿರುವ ಪುರಾವೆಗಳು ಆಧಾರರಹಿತವಾಗಿವೆ. ಇಲ್ಲಿಯವರೆಗೆ, ದೆಹಲಿ ಪೊಲೀಸರಿಂದ ಯಾವುದೇ ದೃಢವಾದ ಸಾಕ್ಷ್ಯ ಪ್ರಸ್ತುತಪಡಿಸಲಾಗಿಲ್ಲ ಮತ್ತು ಈ ಪ್ರಕರಣವು ಮುಂದುವರೆದಂತೆ ದೆಹಲಿ ಪೊಲೀಸರೂ ಈ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.