ನವದೆಹಲಿ/ಬೆಂಗಳೂರು: ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವನ್ನು ಸ್ವಾಗತಿಸಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, "ಇದು ದೇಶದ ಮಹಿಳೆಯ ಹಿತದೃಷ್ಟಿಯಿಂದ ಕೈಗೊಂಡ ಸಮಯೋಚಿತ ನಿರ್ಧಾರ" ಎಂದರು. ಶುಕ್ರವಾರ ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ಕೆಲವೇ ಹೊತ್ತಲ್ಲಿ ನವದೆಹಲಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. "ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗ ಮೀಸಲಾತಿ ದೊರಕಿದ್ದು, ಇದು ಅವರ ಸಮಯ" ಎಂದು ಬಣ್ಣಿಸಿದರು.
"ನಾನು ಪ್ರಧಾನಿಯಾಗಿದ್ದಾಗ 1996ರಲ್ಲಿ ಈ ಮಸೂದೆಯನ್ನು ಮತ್ತೆ ತಂದಿದ್ದೆ. ಆದರೆ ಅಂಗೀಕಾರಗೊಳಿಸುವಲ್ಲಿ ವಿಫಲನಾಗಿದ್ದೆ. ನಂತರ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಈ ವಿಷಯದ ಎರಡು ಬಾರಿ ಪ್ರಸ್ತಾಪವಾಗಿತ್ತು. ಆದರೆ ಎರಡು ಬಾರಿಯೂ ಅವರ ಸರ್ಕಾರ ಈ ವಿಷಯದಲ್ಲಿ ಬಹುಮತ ಪಡೆಯಲಿಲ್ಲ. ಆದರೆ ನೀವು ಬಿಜೆಪಿ ಸರ್ಕಾರ ಅದೃಷ್ಟವಂತರು. ಸಂಸತ್ತಿನಲ್ಲಿ ಮಸೂದೆಗೆ ಅಂಗೀಕಾರ ಸಿಕ್ಕಿದೆ" ಎಂದು ಹೇಳಿದರು.
ಪ್ರಧಾನಿ ಮೋದಿ ಅವರನ್ನು ಭೇಟಿಯಾಗುತ್ತೀರಾ ಎಂಬ ಪ್ರಶ್ನೆಗೆ, ನಗುತ್ತಲೇ ಪ್ರತಿಕ್ರಿಯಿಸಲು ನಿರಾಕರಿಸಿದರು.
ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳೆಡರ ಮಧ್ಯೆ ವಿವಾದ ಸೃಷ್ಟಿಸಿರುವ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಮಾತನಾಡುತ್ತಾ, "ಈ ಬಗ್ಗೆ ನಾನು ಸದನದಲ್ಲೇ ಹೇಳಿದ್ದೇನೆ. ತಮಿಳುನಾಡು ಅಥವಾ ಕರ್ನಾಟಕಕ್ಕೆ ಸೇರದ ಐವರು ಸದಸ್ಯರನ್ನು ಕಳುಹಿಸಲಿ. ಅಲ್ಲಿ ಬಂದು ಪರಿಸ್ಥಿತಿ, ಬೆಳೆ ಸ್ಥಿತಿ, ಸಂಗ್ರಹಣೆಯ ಬಗ್ಗೆ ಅಧ್ಯಯನ ಮಾಡಲಿ" ಎಂದು ಹೇಳಿದರು.
ಬಿಜೆಪಿ- ಜೆಡಿಎಸ್ ಸೀಟು ಹಂಚಿಕೆ:ಲೋಕಸಭೆ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಸಂಬಂಧ ಉಭಯ ನಾಯಕರು ಇಂದು ಸಭೆ ನಡೆಸಲಿದ್ದಾರೆ. ನಿನ್ನೆ ನಿಗದಿಯಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಸಭೆ ಇಂದು ನಿಗದಿಯಾಗಿದೆ. ಲೋಕಸಭಾ ವಿಶೇಷ ಅಧಿವೇಶನ ನಿನ್ನೆ ತಡವಾಗಿ ಮುಗಿದ ಹಿನ್ನೆಲೆಯಲ್ಲಿ ಇಂದು ಮೈತ್ರಿ ಮಾತುಕತೆ ನಡೆಯಲಿದ್ದು, ಸಂಜೆಯೊಳಗಾಗಿ ಜೆಡಿಎಸ್-ಬಿಜೆಪಿ ನಡುವಿನ ದೋಸ್ತಿ ಬಗ್ಗೆ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ.