ನವದೆಹಲಿ: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ ಫೈಲ್ಸ್' ಚಿತ್ರ ಮತ್ತು ಸಿನಿಮಾ ಆಸಕ್ತರಿಗೆ ಬಿಜೆಪಿ ಆಡಳಿತ ಇರುವ ರಾಜ್ಯಗಳು ಖುಷಿ ವಿಚಾರವನ್ನು ನೀಡಿವೆ. ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ತೆರಿಗೆ ರಹಿತ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ.
ಮಾ.11ರಂದು 'ದಿ ಕಾಶ್ಮೀರ ಫೈಲ್ಸ್' ಚಿತ್ರ ಬಿಡುಗಡೆಯಾಗಿದೆ. ಶುಕ್ರವಾರ ಹರಿಯಾಣ ಸರ್ಕಾರ ತನ್ನ ರಾಜ್ಯದಲ್ಲಿ ತೆರಿಗೆ ರಹಿತ ಪ್ರದರ್ಶನದ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಗುಜರಾತ್ ಮತ್ತು ಮಧ್ಯಪ್ರದೇಶ ಸರ್ಕಾರಗಳು ಕೂಡ ತೆರಿಗೆ ರಹಿತ ಪ್ರದರ್ಶನಕ್ಕೆ ಅವಕಾಶ ನೀಡಿವೆ.
'ದಿ ಕಾಶ್ಮೀರ ಫೈಲ್ಸ್' ಚಿತ್ರವು 90ರ ದಶಕದಲ್ಲಿ ಕಾಶ್ಮೀರಿ ಹಿಂದೂಗಳು ಎದುರಿಸಿದ ನೋವು, ಸಂಕಟ, ಹೋರಾಟ ಮತ್ತು ಆಘಾತದ ಕುರಿತ ಹೃದಯ ವಿದ್ರಾವಕ ನಿರೂಪಣೆಯನ್ನು ಹೊಂದಿದೆ. ಈ ಚಿತ್ರವನ್ನು ಅತ್ಯಧಿಕ ಸಂಖ್ಯೆಯ ಜನರು ವೀಕ್ಷಿಸಬೇಕಾಗಿದೆ. ಆದ್ದರಿಂದ ಮಧ್ಯಪ್ರದೇಶ ರಾಜ್ಯದಲ್ಲಿ ಚಿತ್ರ ಪ್ರದರ್ಶನವನ್ನು ತೆರಿಗೆ ಮುಕ್ತಗೊಳಿಸಲು ನಿರ್ಧರಿಸಿದ್ದೇವೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಟ್ವೀಟ್ ಮೂಲಕ ತಿಳಿಸಿದ್ದಾರೆ.