ಕರ್ನಾಟಕ

karnataka

ETV Bharat / bharat

GST Collection: ಜೂನ್​ ತಿಂಗಳ ಜಿಎಸ್​ಟಿ ಸಂಗ್ರಹದಲ್ಲಿ ಹೆಚ್ಚಳ: ₹ 1.61 ಲಕ್ಷ ಕೋಟಿಗೂ ಮೀರಿದ ಆದಾಯ - ಕೇಂದ್ರ ಜಿಎಸ್​ಟಿ

ದೇಶದ ಮಾಸಿಕ ಜಿಎಸ್​ಟಿ ಸಂಗ್ರಹದಲ್ಲಿ ಹೆಚ್ಚಳವಾಗಿದೆ. ಜೂನ್​ ತಿಂಗಳಲ್ಲಿ ಒಟ್ಟು ಜಿಎಸ್​ಟಿ ಆದಾಯ ಸಂಗ್ರಹವು 1.61 ಲಕ್ಷ ರೂಪಾಯಿ ಕೋಟಿಗೂ ಮೀರಿದೆ. ಕರ್ನಾಟಕದಿಂದ 11,193.20 ಕೋಟಿ ಜಿಎಸ್​ಟಿ ಸಂಗ್ರಹವಾಗಿದೆ.

gross-gst-revenue-collected-in-the-month-of-june-2023-rs-161-497-crore
ಜೂನ್​ ತಿಂಗಳ ಜಿಎಸ್​ಟಿ ಸಂಗ್ರಹದಲ್ಲಿ ಹೆಚ್ಚಳ: ₹ 1.61 ಲಕ್ಷ ಕೋಟಿಗೂ ಮೀರಿದ ಆದಾಯ

By

Published : Jul 1, 2023, 5:33 PM IST

ನವದೆಹಲಿ:ಪ್ರಸಕ್ತ ಹಣಕಾಸಿನ ವರ್ಷದ ಜೂನ್​ ತಿಂಗಳಲ್ಲಿ ಒಟ್ಟು ಜಿಎಸ್​ಟಿ (ಸರಕು ಮತ್ತು ಸೇವಾ ತೆರಿಗೆ) ಆದಾಯ ಸಂಗ್ರಹವು 1,61,497 ಕೋಟಿ ರೂಪಾಯಿ ಆಗಿದೆ. ಕಳೆದ ವರ್ಷದ ಇದೇ ಜೂನ್​ ತಿಂಗಳಿಗೆ ಹೋಲಿಸಿದರೆ ಈ ಬಾರಿ ಶೇ.12ರಷ್ಟು ಜಿಎಸ್​ಟಿ ಸಂಗ್ರಹ ಹೆಚ್ಚಳವಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ.

ಜಿಎಸ್​ಟಿ ಸಂಗ್ರಹದ ಮಾಹಿತಿ

ಜೂನ್​ ತಿಂಗಳ ಒಟ್ಟು ಜಿಎಸ್​ಟಿ ಆದಾಯ ಸಂಗ್ರಹದಲ್ಲಿ ಕೇಂದ್ರ ಜಿಎಸ್​ಟಿ (ಸಿಜಿಎಸ್‌ಟಿ - CGST ) 31,013 ಕೋಟಿ ರೂ. ಮತ್ತು ರಾಜ್ಯ ಜಿಎಸ್​ಟಿ (ಎಸ್‌ಜಿಎಸ್‌ಟಿ - SGST ) 38,292 ಕೋಟಿ ರೂ. ಹಾಗೂ ಸಮಗ್ರ ಜಿಎಸ್​ಟಿ (ಐಜಿಎಸ್‌ಟಿ - IGST) 80,292 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 39,035 ಕೋಟಿ ರೂ. ಸೇರಿ) ಮತ್ತು ಸೆಸ್ 11,900 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 1,028 ಕೋಟಿ ರೂ. ಸೇರಿ) ಆಗಿದೆ ಎಂದು ಮಾಹಿತಿ ನೀಡಿದೆ.

ಸರ್ಕಾರವು ಐಜಿಎಸ್‌ಟಿಯಿಂದ ಸಿಜಿಎಸ್‌ಟಿಗೆ 36,224 ಕೋಟಿ ರೂ. ಮತ್ತು ಎಸ್‌ಜಿಎಸ್‌ಟಿಗೆ 30269 ಕೋಟಿ ರೂ. ಹಂಚಿಕೆ ಮಾಡಿದೆ. ಈ ನಿಯಮಿತ ಇತ್ಯರ್ಥದ ನಂತರ ಜೂನ್ 2023ರಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಐಜಿಎಸ್‌ಟಿ 67,237 ಕೋಟಿ ರೂ. ಮತ್ತು ಎಸ್​ಜಿಎಸ್​ಟಿ 68,561 ಕೋಟಿ ರೂ. ಆಗಲಿದೆ. ಈ ಜೂನ್ ತಿಂಗಳ ಆದಾಯವು ಕಳೆದ ವರ್ಷದ ಅದೇ ತಿಂಗಳ ಜಿಎಸ್​ಟಿ ಆದಾಯಕ್ಕಿಂತ ಶೇ.12ರಷ್ಟು ಅಧಿಕವಾಗಿದೆ. ಅಲ್ಲದೇ, ಈ ತಿಂಗಳಿನಲ್ಲಿ ದೇಶೀಯ ವಹಿವಾಟುಗಳಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷದ ಇದೇ ತಿಂಗಳಿನಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇ.18ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದೆ.

ಮೊದಲ ತ್ರೈಮಾಸಿಕದಲ್ಲಿ ನಾಲ್ಕನೇ ಬಾರಿಗೆ ಒಟ್ಟು ಜಿಎಸ್‌ಟಿ ಸಂಗ್ರಹವು 1.60 ಲಕ್ಷ ಕೋಟಿ ರೂಪಾಯಿ ತಲುಪಿದೆ. 2021-22ರ ಆರ್ಥಿಕ ವರ್ಷ, 22-23ರ ಆರ್ಥಿಕ ವರ್ಷ, 23-24ರ ಆರ್ಥಿಕದ ಮೊದಲ ತ್ರೈಮಾಸಿಕಕ್ಕೆ ಸರಾಸರಿ ಮಾಸಿಕ ಒಟ್ಟು ಜಿಎಸ್​ಟಿ ಸಂಗ್ರಹವು ಕ್ರಮವಾಗಿ 1.10 ಲಕ್ಷ ಕೋಟಿ ರೂ., 1.51 ಲಕ್ಷ ಕೋಟಿ ರೂ. ಮತ್ತು 1.69 ಲಕ್ಷ ಕೋಟಿ ರೂ. ಆಗಿತ್ತು ಎಂದು ವಿತ್ತ ಇಲಾಖೆ ವಿವರಿಸಿದೆ.

2023ರ ಏಪ್ರಿಲ್‌ ತಿಂಗಳಿನಲ್ಲಿ 1.87 ಲಕ್ಷ ಕೋಟಿ ರೂಪಾಯಿಗಳ ದಾಖಲೆಯ ಜಿಎಸ್​ಟಿ ಆದಾಯ ಸಂಗ್ರಹವಾಗಿತ್ತು. ಮೇ ತಿಂಗಳಲ್ಲಿ 1,57,090 ಕೋಟಿ ರೂಪಾಯಿ ಪರೋಕ್ಷ ತೆರಿಗೆ ತೆರಿಗೆ ಸಂಗ್ರಹವಾಗಿತ್ತು. ಜೂನ್​ ತಿಂಗಳಲ್ಲಿ ಜಿಎಸ್​ಟಿ ಆದಾಯ ಸಂಗ್ರಹವು 1,61,497 ಕೋಟಿ ರೂಪಾಯಿ ಆಗಿದೆ. ಇದರೊಂದಿಗೆ ಮಾಸಿಕ ಜಿಎಸ್‌ಟಿ ಆದಾಯ ಸತತ 15ನೇ ತಿಂಗಳಿಗೂ 1.4 ಲಕ್ಷ ಕೋಟಿ ರೂ.ಗೂ ಹೆಚ್ಚು ಸಂಗ್ರಹ ಕಂಡಿದೆ.

ಇದನ್ನೂ ಓದಿ:ಮೇ ತಿಂಗಳಲ್ಲಿ 1,57,090 ಕೋಟಿ ಜಿಎಸ್​ಟಿ ಆದಾಯ: ಶೇ 12ರಷ್ಟು ಏರಿಕೆ!

ABOUT THE AUTHOR

...view details