ಬ್ಯಾಟಿಂಗ್ ದಿಗ್ಗಜ, ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರು ಪ್ರಧಾನಿ ನರೇಂದ್ರ ಮೋದಿಯನ್ನು 'ಐಕಾನಿಕ್ ಲೀಡರ್' ಎಂದು ಬಣ್ಣಿಸಿದ್ದಾರೆ. ಮೋದಿ ಭಾನುವಾರ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ವೈಲ್ಡ್‌ಲೈಫ್ ಸಫಾರಿ ನಡೆಸಿದ್ದರು. ತಮಿಳುನಾಡಿನ ತೆಪ್ಪಕಾಡಿನ ಆನೆ ಶಿಬಿರಕ್ಕೂ ಭೇಟಿ ನೀಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಕೆವಿನ್, ವಿಶ್ವನಾಯಕ ಎಂದು ಪ್ರಧಾನಿ ಮೋದಿಯನ್ನು ಹೊಗಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೆವಿನ್ ಪೀಟರ್ಸನ್, ''ವಿಶ್ವನಾಯಕರೊಬ್ಬರು ಕಾಡು ಪ್ರಾಣಿಗಳ ಬಗ್ಗೆ ಅಪಾರ ಕಾಳಜಿ ವಹಿಸುತ್ತಾರೆ. ಅವುಗಳ ಆವಾಸಸ್ಥಾನದಲ್ಲಿ ಸಮಯ ಕಳೆಯುವುದರಲ್ಲಿ ಉತ್ಸುಕರಾಗಿದ್ದಾರೆ. ಇವರು ತಮ್ಮ ಜನ್ಮದಿನದಂದು ಭಾರತಕ್ಕೆ ಚಿರತೆಗಳನ್ನು ತಂದು ಕಾಡಿಗೆ ಬಿಟ್ಟಿದ್ದನ್ನು ನಾವು ನೆನಪಿಸಿಕೊಳ್ಳಬೇಕು. ಹೀರೋ, ನರೇಂದ್ರ ಮೋದಿ..." ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆವಿನ್ ಪೀಟರ್ಸನ್ ಕೂಡ ತಮ್ಮ ಸೋರೈ (Save Our Rhinos in Africa and India) ಎಂಬ ಸಂಸ್ಥೆಯ ಮೂಲಕ ಘೇಂಡಾಮೃಗಗಳ ರಕ್ಷಣೆಯ ಕಾರ್ಯ ಮಾಡುತ್ತಿದ್ದಾರೆ.
ಹುಲಿ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಭೇಟಿ ನೀಡಿದ್ದರು. ತೆರೆದ ಜೀಪ್ನಲ್ಲಿ ವನ್ಯಜೀವಿ ಸಫಾರಿ ನಡೆಸಿದ ಅವರು, ಬಂಡೀಪುರದ ವನ್ಯ ಜೀವಿಗಳನ್ನು ಕಣ್ತುಂಬಿಕೊಂಡಿದ್ದರು. ಸಫಾರಿ ದಿರಿಸು ಧರಿಸಿ, ಟೋಪಿ, ಗಾಗಲ್ಸ್ ಜೊತೆಗೆ ಕ್ಯಾಮರಾ ಹಿಡಿದು, ವನ್ಯಜೀವಿಗಳು, ಪ್ರಕೃತಿ ಸೌಂದರ್ಯವನ್ನು ಅನುಭವಿಸಿದ್ದರು.