ರಾಯಪುರ :ಛತ್ತೀಸ್ಗಢದ ವಿಧಾನಸಭೆ ಸ್ಪೀಕರ್ ಆಗಿ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸ್ಪೀಕರ್ ಸ್ಥಾನಕ್ಕೆ ಅವರು ಭಾನುವಾರ ನಾಮಪತ್ರ ಸಲ್ಲಿಸಿದ್ದರು. ಪ್ರತಿಪಕ್ಷ ಕಾಂಗ್ರೆಸ್ ಕೂಡ ರಮಣ್ ಸಿಂಗ್ ಅವರಿಗೆ ಬೆಂಬಲ ಸೂಚಿಸಿದೆ. ಇದರಿಂದ ಸ್ಪೀಕರ್ ಆಯ್ಕೆ ಸುಲಭವಾಗಿ ಜರುಗಿದೆ.
ಬಿಜೆಪಿ ಹಿರಿಯ ನಾಯಕರಾದ ರಮಣ್ ಸಿಂಗ್ ರಾಜ್ಯದ ಆರನೇ ವಿಧಾನ ಸಭಾಧ್ಯಕ್ಷರಾಗಿದ್ದಾರೆ. ಶಾಸಕಾಂಗ ಪಕ್ಷದ ನಾಯಕ ವಿಷ್ಣುದೇವ್ ಸಾಯಿ ಮತ್ತು ವಿರೋಧ ಪಕ್ಷದ ನಾಯಕ ಡಾ.ಚರಂದಾಸ್ ಮಹಂತ್ ಅವರು ರಮಣ್ ಸಿಂಗ್ ಅವರನ್ನು ಕರೆದುಕೊಂಡು ಹೋಗಿ ಸಭಾಧ್ಯಕ್ಷರ ಪೀಠದಲ್ಲಿ ಕುಳ್ಳಿರಿಸಿ ಅಭಿನಂದಿಸಿದರು. ಅಧಿಕಾರ ಸ್ವೀಕರಿಸಿದ ರಮಣ್ ಸಿಂಗ್ ಅವರು ಪಕ್ಷ ಮತ್ತು ವಿರೋಧ ಪಕ್ಷದ ಶಾಸಕರಿಗೆ ಅಭಿನಂದನೆ ಸಲ್ಲಿಸಿದ್ದರು.
ರಮಣ್ ಸಿಂಗ್ ಹಿನ್ನಲೆ : ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜನಂದಗಾಂವ್ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಿಎಂ ರಮಣ್ ಸಿಂಗ್ ಭರ್ಜರಿ ಗೆಲುವು ದಾಖಲಿಸಿದ್ದರು. ರಮಣ್ ಕಾಂಗ್ರೆಸ್ ಅಭ್ಯರ್ಥಿ ಗಿರೀಶ್ ದೇವಾಂಗನ್ ಅವರನ್ನು 45084 ಮತಗಳ ಅಂತರದಿಂದ ಸೋಲಿಸಿದ್ದರು. ರಮಣ್ ಸಿಂಗ್ 1952ರ ಅಕ್ಟೋಬರ್ 15ರಂದು ಕಬೀರ್ಧಾಮ್ ಜಿಲ್ಲೆಯ ರಾಂಪುರದಲ್ಲಿ ಜನಿಸಿದರು. ತಂದೆ ವಿಘ್ನಹರನ್ ಸಿಂಗ್ ಠಾಕೂರ್ ಮತ್ತು ತಾಯಿ ಸುಧಾ ಸಿಂಗ್. ರಮಣ್ ಸಿಂಗ್, ವೀಣಾ ಸಿಂಗ್ ಅವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಮಗ ಅಭಿಷೇಕ್ ಸಿಂಗ್ ಸಂಸದರಾಗಿದ್ದರು.