ಕಡಪ (ಆಂಧ್ರಪ್ರದೇಶ): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ (depression over Bay of Bengal) ಪರಿಣಾಮ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಆಂಧ್ರದಲ್ಲಂತೂ ಪ್ರವಾಹ ಪರಿಸ್ಥಿತಿ (Flood in Andhra Pradesh) ಉಂಟಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇಲ್ಲಿಯವರೆಗೆ ಮಳೆ ಸಂಬಂಧಿತ ಅವಘಡಗಳಿಗೆ 20 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಶಂಕೆ ಇದೆ.
ಪ್ರವಾಹ, ಭೂಕುಸಿತ ಸೇರಿದಂತೆ ವರುಣನ ಅವಾಂತರದಲ್ಲಿ ಬಲಿಯಾದವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಸಿಎಂ ಜಗನ್ ಮೋಹನ್ ರೆಡ್ಡಿ (CMJagan Mohan Reddy announces ex gratia) ಘೋಷಿಸಿದ್ದಾರೆ.
ಚಿತ್ತೂರು, ಕಡಪ ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಮನೆಗಳು, ರಸ್ತೆಗಳು, ಕಟ್ಟಡಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಕೆಲವೆಡೆ ರಸ್ತೆ, ಸೇತುವೆಗಳು ಸಂಪೂರ್ಣ ಕೊಚ್ಚಿ ಹೋಗಿದ್ದು, ಜನರು ಮಧ್ಯದಾರಿಯಲ್ಲಿ ಸಿಲುಕಿ ಸಂಪರ್ಕ ಕಳೆದುಕೊಂಡಿದ್ದಾರೆ. ವೆಂಕಟೇಶ್ವರನ ಆವಾಸಸ್ಥಾನವಾದ ತಿರುಮಲವಂತೂ ಪ್ರವಾಹ-ಭೂಕುಸಿತ ಎರಡಕ್ಕೂ ತುತ್ತಾಗಿದೆ. ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ನೀರು ನುಗ್ಗಿದ್ದು, ಒಳಗಿದ್ದ ಭಕ್ತರು ಆತಂಕಕ್ಕೆ ಒಳಗಾಗಿದ್ದಾರೆ.