ಚೆನ್ನೈ (ತಮಿಳುನಾಡು):ಪುಣ್ಯಸ್ನಾನಕ್ಕಾಗಿ ಕಲ್ಯಾಣಿಗಿಳಿದ ಐವರು ಮುಳುಗಿ ಮೃತಪಟ್ಟ ಘಟನೆ ಇಂದು(ಬುಧವಾರ) ಬೆಳಗ್ಗೆ ತಮಿಳುನಾಡಿನ ಆಲಂದೂರಿನಲ್ಲಿ ನಡೆದಿದೆ. ದೇವರ ಮೂರ್ತಿಯ ಮೆರವಣಿಗೆಯಲ್ಲಿ ಈ ಐವರು ಪಾಲ್ಗೊಂಡಿದ್ದರು. ಪಲ್ಲಕ್ಕಿಯನ್ನು ದಡದಲ್ಲಿಟ್ಟು ಕಲ್ಯಾಣಿಗೆ ಇಳಿದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತರನ್ನು ನಂಗನಲ್ಲೂರು ನಿವಾಸಿ ಸೂರ್ಯ (24), ರಾಘವನ್ (18), ಪಣೇಶ್ (20), ಮಡಿಪಾಕ್ಕಂ ಪ್ರದೇಶದ ರಾಘವನ್ (22) ಮತ್ತು ಕಿಲಿಕತ್ತಲೈ ಪ್ರದೇಶದ ಯೋಗೇಶ್ವರನ್ (23) ಎಂದು ಗುರುತಿಸಲಾಗಿದೆ.
ಘಟನೆ ಹೀಗೆ ನಡೀತು..: ಆಲಂದೂರು ಪಕ್ಕದ ಮಡಿಪಾಕ್ಕಂ ಪ್ರದೇಶದಲ್ಲಿ ಅರ್ಧನಾರೀಶ್ವರ ದೇವಸ್ಥಾನದಲ್ಲಿ ನಡೆದ ಉತ್ಸವದ ನಿಮಿತ್ತ ಸುಮಾರು 20 ಮಂದಿ ಭಕ್ತರು ಶಿವನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಹೊತ್ತುಕೊಂಡು ಮೆರವಣಿಗೆ ಮಾಡುತ್ತಿದ್ದರು. ಮೆರವಣಿಗೆಯ ಕೊನೆಯಲ್ಲಿ ಪಲ್ಲಕ್ಕಿಯನ್ನು ದೇವಸ್ಥಾನದ ಆವರಣದಲ್ಲಿರುವ ಕಲ್ಯಾಣಿಯ ದಡದಲ್ಲಿ ಬಿಟ್ಟು ಎಲ್ಲರೂ ಕೂಡ ನೀರಿಗೆ ಇಳಿದ್ದರು. ಈ ಪೈಕಿ ಐವರು ನೀರಿನಲ್ಲಿ ಮುಳುಗಿ ಹೊರಬರಲಾರದೇ ಸಾವನ್ನಪ್ಪಿದ್ದಾರೆ. ಉಳಿದವರು ಸುರಕ್ಷಿತವಾಗಿದ್ದಾರೆ. ತಕ್ಷಣವೇ ಸ್ಥಳೀಯರು ಶೋಧ ಕಾರ್ಯ ಆರಂಭಿಸಿ, ವೆಲಚೇರಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಲ್ಯಾಣಿಯಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ:ಸಿಹಿ ತಿಂಡಿ ಕದ್ದ ಆರೋಪ: ಪರಿಶಿಷ್ಟ ಜಾತಿಯ ಇಬ್ಬರ ವಿದ್ಯಾರ್ಥಿಗಳನ್ನು ಕಂಬಕ್ಕೆ ಥಳಿತ
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕ್ರೋಮ್‌ಪೇಟೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ನಂತರ ಸ್ಥಳಕ್ಕೆ ಚೆನ್ನೈ ಮಹಾನಗರ ಪೊಲೀಸ್ ಆಯುಕ್ತ ಶಂಕರ್ ಜಿವಾಲ್, ಹೆಚ್ಚುವರಿ ಆಯುಕ್ತ ಪ್ರೇಮ್ ಆನಂದ್ ಸಿನ್ಹಾ, ದಕ್ಷಿಣ ಜಂಟಿ ಆಯುಕ್ತರು ಸೇರಿದಂತೆ ಹಲವು ಅಧಿಕಾರಿಗಳು ಧಾವಿಸಿದ್ದಾರೆ.
ಶಂಕರ್ ಜಿವಾಲ್ ಮಾತನಾಡಿ, "ಕಲ್ಯಾಣಿಯಿಂದ ಮೃತದೇಹಗಳನ್ನು ಹೊರತೆಗೆದಿದ್ದೇವೆ. ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸುತ್ತೇವೆ. ಮುಂದೆ ಇಂತಹ ದುರ್ಘಟನೆಗಳು ಸಂಭವಿಸದಂತೆ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದರು. ಇದೇ ವೇಳೆ, "ದೇವಸ್ಥಾನದ ಕಲ್ಯಾಣಿಗೆ ಇಳಿಯುವ ಬಗ್ಗೆ ಸ್ಥಳೀಯ ಪೊಲೀಸರ ಅನುಮತಿ ಪಡೆದಿರಲಿಲ್ಲ. ದೇವಸ್ಥಾನದ ಆಡಳಿತಾಧಿಕಾರಿಗಳನ್ನು ಪೊಲೀಸರು ವಿಚಾರಣೆ ನಡೆಸಲು ಮುಂದಾಗಿದ್ದಾರೆ" ಎಂದು ತಿಳಿದು ಬಂದಿದೆ.
ಕುಟುಂಬಸ್ಥರಿಗೆ ಸಚಿವರ ಸಾಂತ್ವನ:ವಿಷಯ ತಿಳಿದು ಸಚಿವ ಥಾಮೋ ಅನ್‌ಪರಸನ್ ಕ್ರೋಮ್‌ಪೇಟೆ ಆಸ್ಪತ್ರೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೇವಸ್ಥಾನದ ತೀರ್ಥವಾರಿ ವೇಳೆ ಐವರು ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವುದು ದುರದೃಷ್ಟಕರ. ಎಲ್ಲರೂ ಯುವಕರು ಮತ್ತು ವಿದ್ಯಾವಂತರು. ಘಟನೆ ಎಲ್ಲರಿಗೂ ನೋವುಂಟು ಮಾಡಿದೆ. ಮೃತರ ಕುಟುಂಬಗಳಿಗೆ ಸಿಎಂ ನೆರವು ನೀಡಲಿದ್ದಾರೆ" ಎಂದು ತಿಳಿಸಿದರು.
ಇದನ್ನೂ ಓದಿ:ಹಿಂಸಾಚಾರದ ಸುದ್ದಿಗಳ ನಡುವೆ ಕೋಮು ಸಾಮರಸ್ಯ ಸ್ಥಾಪನೆ.. ರಾಮನವಮಿ ರಥ ಮುನ್ನಡೆಸಿದ ಮುಸ್ಲಿಂ ವ್ಯಕ್ತಿ