ಕನೌಜ್ (ಉತ್ತರ ಪ್ರದೇಶ): ಕನೌಜ್ ಜಿಲ್ಲೆಯಲ್ಲಿ ರೌಡಿಶೀಟರ್, ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿಷ್ಣುಗಾನ್ ಪೊಲೀಸ್ ಠಾಣೆಯ ಪೊಲೀಸರು ಸೋಮವಾರ ಸಂಜೆ, ನೋಟಿಸ್ ಅಂಟಿಸಲು ರೌಡಿಶೀಟರ್ ಮನೆಗೆ ತೆರಳಿದ್ದರು. ಈ ವೇಳೆ, ರೌಡಿಶೀಟರ್ ತನ್ನ ಪುತ್ರನೊಂದಿಗೆ ಪೊಲೀಸ್ ತಂಡದ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾನೆ.
ಗುಂಡಿನ ಚಕಮಕಿಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರೀಜೆನ್ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಕಾನ್ಸ್ಟೇಬಲ್ ಸಚಿನ್ ರಾಠಿ ಮೃತಪಟ್ಟಿದ್ದಾರೆ. ಎಲ್ಲ ಕಡೆಯಿಂದ ಪೊಲೀಸರು ಮನೆಯನ್ನು ಸುತ್ತುವರಿದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ಕೋಲಾಹಲ ಉಂಟಾಗಿದೆ.
ವಿಷ್ಣುಗನ್ ಪೊಲೀಸ್ ಠಾಣಾ ವ್ಯಾಪ್ತಿಯ ಧರಣಿ ಧೀರ್‌ಪುರ ನಗರಿಯ ನಿವಾಸಿ ರೌಡಿಶೀಟರ್ ಅಶೋಕ್ ಅಲಿಯಾಸ್ ಮುನ್ನಾ ಯಾದವ್ ಅವರ ಮನೆಗೆ ನೋಟಿಸ್ ಅಂಟಿಸಲು ಪೊಲೀಸರು ತೆರಳಿದ್ದರು. ಈ ವೇಳೆ, ತನ್ನ ಪುತ್ರನೊಂದಿಗೆ ಮನೆಯಲ್ಲಿದ್ದ ರೌಡಿಶೀಟರ್ ಮನಬಂದಂತೆ ಗುಂಡು ಹಾರಿಸಿದ್ದಾನೆ. ಈ ಗುಂಡಿನ ದಾಳಿಯಲ್ಲಿ ಕಾನ್ಸ್ಟೇಬಲ್ ಸಚಿನ್ ರಾಠಿ ಅವರಿಗೆ ಗುಂಡು ತಗುಲಿದೆ. ಗುಂಡಿನ ದಾಳಿಯಿಂದ ಪೊಲೀಸ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಕಾನ್ಸ್ಟೇಬಲ್ನನ್ನು ಚಿಕಿತ್ಸೆಗಾಗಿ ಕನೌಜ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಸ್ಥಿತಿ ಕಂಡ ವೈದ್ಯರು, ಕಾನ್ಸ್ಟೇಬಲ್ನನ್ನು ಕಾನ್ಪುರಕ್ಕೆ ಕಳುಹಿಸಿದ್ದಾರೆ.