ಕಾಮರೆಡ್ಡಿ(ತೆಲಂಗಾಣ):ಕಾಮರೆಡ್ಡಿ ಜಿಲ್ಲೆಯ ಗ್ರಾಮವೊಂದರಲ್ಲಿ 14 ವರ್ಷದ ಇಬ್ಬರು ಅವಳಿ ಸಹೋದರಿಯರನ್ನು ಅವರ ತಂದೆ ಹಾಗೂ ಮಲತಾಯಿ ಮಾರಾಟ ಮಾಡಿರುವ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದಂಪತಿ ಹಾಗೂ ಐವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಸ್‌ಪಿ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಏನಿದು ಪ್ರಕರಣ: ಕಾಮರೆಡ್ಡಿ ಜಿಲ್ಲೆಯ ಮಚರೆಡ್ಡಿ ಮಂಡಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅವಳಿ ಸಹೋದರಿಯರು ಎರಡು ವರ್ಷದವರಿದ್ದಾಗಲೇ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಅವರ ತಂದೆ ಎರಡನೇ ವಿವಾಹವಾಗಿದ್ದು, ಎರಡನೇ ಹೆಂಡತಿಗೆ ಒಬ್ಬ ಮಗ ಮತ್ತು ಒಬ್ಬಳು ಮಗಳಿದ್ದಾಳೆ. ಹಣಕಾಸಿನ ಮುಗ್ಗಟ್ಟಿನಿಂದ ಆರೋಪಿ ತಂದೆ ನಾಲ್ಕು ಮಕ್ಕಳನ್ನು ಸಾಕುವುದು ಕಷ್ಟ ಎಂದು ಭಾವಿಸಿ ಹೆಣ್ಣು ಮಕ್ಕಳನ್ನು ಮಾರಾಟ ಮಾಡಲು ಮುಂದಾಗಿದ್ದರು ಎಂದು ಎಸ್ಪಿ ರೆಡ್ಡಿ ಹೇಳಿದರು.
ಈ ರೀತ ತನಗೆ ನಾಲ್ಕು ಮಕ್ಕಳನ್ನು ಸಾಕುವುದು ಕಷ್ಟವಾಗಿದೆ. ನಾಲ್ವರಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಮಾರುತ್ತೇನೆ ಎಂದು ತನ್ನ ಯೋಜನೆಯನ್ನು ತನಗೆ ತಿಳಿದಿರುವ ಒಬ್ಬ ಸಂಬಂಧಿಗೆ ತಿಳಿಸಿದ್ದಾನೆ. ಸಂಬಂಧಿ ಹೆಣ್ಣು ಮಕ್ಕಳ ತಂದೆಯನ್ನು ರಾಜಸ್ಥಾನದ ಒಬ್ಬ ವ್ಯಕ್ತಿಗೆ ಪರಿಚಯಿಸಿದ್ದಾನೆ. ಆರೋಪಿ ತಂದೆ ಮೇದಕ್ ಜಿಲ್ಲೆಯ ಮನೋಹರಾಬಾದ್ ಮಂಡಲದ ದಂಡುಪಲ್ಲಿಯ ಶರ್ಮನ್ ಎಂಬವನಿಗೆ ಒಬ್ಬ ಹೆಣ್ಣು ಮಗಳನ್ನು 80,000 ರೂ.ಗೆ ಮಾರಾಟ ಮಾಡಿದ್ದಾನೆ. 2ನೇ ಮಗಳನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಕಂದರಾಬಾದ್‌ನ ಬೋಯಿನಪಲ್ಲಿಯ ಕೃಷ್ಣಕುಮಾರ್ ಎಂಬುವವರಿಗೆ 50,000 ರೂ.ಗೆ ಮಾರಾಟ ಮಾಡಲಾಗಿತ್ತು ಎಂದು ಎಸ್ಪಿ ತಿಳಿಸಿದರು.