ಮೀರತ್(ಉತ್ತರಪ್ರದೇಶ):ಸ್ಫೋಟ ಸಂಭವಿಸಿ ಗೋದಾಮುವೊಂದು ಸಂಪೂರ್ಣ ನೆಲಸಮವಾಗಿರುವ ಘಟನೆ ಜಿಲ್ಲೆಯ ಲೋಹಿಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಈ ದುರಂತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಗಾಯಾಳುಗಳನ್ನು ಮೀರತ್ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಮೃತದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಗೋದಾಮು ನೆಲಸಮ: ಮಂಗಳವಾರ ಬೆಳಗ್ಗೆ ಇಲ್ಲಿ ಏಕಾಏಕಿ ಭಾರಿ ಸ್ಫೋಟ ಸಂಭವಿಸಿ ಇಡೀ ಗೋದಾಮು ಧ್ವಂಸಗೊಂಡಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಸಮೀಪದ ಹಲವು ಮನೆಗಳು ಸಹ ತಲ್ಲಣಿಸಿವೆ.ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಸ್ಫೋಟದ ಬಗ್ಗೆ ಮಾಹಿತಿ ಪಡೆದ ಎಸ್‌ಎಸ್‌ಪಿ ಮತ್ತು ಡಿಎಂ ಕೂಡ ಭಾರಿ ಪೊಲೀಸ್ ಪಡೆಯೊಂದಿಗೆ ಸ್ಥಳಕ್ಕೆ ತಲುಪಿದ್ದರು. ಪಟಾಕಿ ಸಿಡಿಸಿದ್ದರಿಂದ ಗೋದಾಮುವಿನಲ್ಲಿ ಸ್ಫೋಟ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಪೊಲೀಸರು ಮಾಧ್ಯಮದವರಿಗೂ ದೂರ ಇರುವಂತೆ ಸೂಚನೆ ನೀಡಿದ್ದಾರೆ.
ಸ್ಫೋಟದ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದು ಹೀಗೆ:ಈ ಬಗ್ಗೆ ಜಿಲ್ಲಾಧಿಕಾರಿ ದೀಪಕ್ ಮೀನಾ ಮಾತನಾಡಿ, ಲೋಹಿಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾಬೂನು ಮತ್ತು ಮಾರ್ಜಕದ ಗೋದಾಮು ಇದೆ. ಗೋದಾಮಿನಲ್ಲಿ ಕೆಲವು ರಾಸಾಯನಿಕ ವಸ್ತುಗಳಿವೆ. ಹೀಗಾಗಿ ಗೋದಾಮಿನಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಘಜಿಯಾಬಾದ್‌ನಿಂದ ಎನ್‌ಡಿಆರ್‌ಎಫ್ ತಂಡಗಳನ್ನು ಸ್ಥಳಕ್ಕೆ ಕರೆಸಲಾಗಿದೆ. ಗೋದಾಮಿ ಕುಸಿತ ಹಿನ್ನೆಲೆ ಇನ್ನೂ ಕೆಲವರು ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆಯಿದೆ. ಈ ಸ್ಫೋಟದಿಂದಾಗಿ ಸಮೀಪದ ಮನೆಗಳಿಗೂ ಹಾನಿಯಾಗಿದೆ. ಗೋದಾಮಿನ ಪಕ್ಕದ ಶಾಲೆಯ ಗೋಡೆಗಳಿಗೂ ಸಾಕಷ್ಟು ನಷ್ಟ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದರು.