ನವದೆಹಲಿ: ಕಳೆದ 70 ವರ್ಷಗಳಲ್ಲಿ ಸೃಷ್ಟಿ ಮಾಡಲಾಗಿದ್ದ ಆಸ್ತಿಯನ್ನ ಇದೀಗ ಕೇಂದ್ರ ಸರ್ಕಾರ ಮಾರಾಟ ಮಾಡುತ್ತಿದೆ ಎಂದು ಆರೋಪ ಮಾಡಿರುವ ರಾಹುಲ್ ಗಾಂಧಿ ಹೇಳಿಕೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿರುಗೇಟು ನೀಡಿದ್ದು, 2008ರಲ್ಲಿ ಮುಂಬೈ-ಪುಣೆ ಎಕ್ಸ್ಪ್ರೆಸ್ ವೇ ಮಾರಾಟ ಮಾಡಿ 8000 ಕೋಟಿ ರೂಪಾಯಿ ಸಂಗ್ರಹ ಮಾಡಿದಾಗ ದೇಶ ಮಾರಾಟ ಮಾಡುತ್ತಿದೆ ಎಂದು ಅನಿಸಲಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ನಗದೀಕರಣ ಯೋಜನೆ ಮೂಲಕ ವಿತ್ತೀಯ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಕೇಂದ್ರದ ಪ್ರಮುಖ 11 ಇಲಾಖೆಯ ಮೂಲಸೌಕರ್ಯ ಅಭಿವೃದ್ಧಿಗಾಗಿ ಭೂಮಿ ಮಾರಾಟಕ್ಕೆ ಕೇಂದ್ರ ನಿರ್ಧಾರ ಮಾಡಿದೆ. ಇದರಿಂದ 6 ಲಕ್ಷ ಕೋಟಿ ರೂ ಸಂಗ್ರಹಿಸಲು ಮುಂದಾಗಿದೆ. ಆದರೆ ಇದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಇದೇ ವಿಚಾರವಾಗಿ ಮಾತನಾಡಿದ್ದ ರಾಹುಲ್ ಗಾಂಧಿ, ಕಳೆದ 70 ವರ್ಷಗಳಲ್ಲಿ ದೇಶದಲ್ಲಿ ಏನು ಅಭಿವೃದ್ಧಿ ಆಗಿಲ್ಲವೆಂದು ಬಿಂಬಿಸುವ ಕೇಂದ್ರ, ಇದೀಗ ಆ ಸಮಯದಲ್ಲಿ ಸೃಷ್ಟಿಯಾಗಿರುವ ಆಸ್ತಿ ಮಾರಾಟ ಮಾಡಲು ಮುಂದಾಗಿದೆ ಎಂದು ಆರೋಪ ಮಾಡಿದ್ದರು.