ತಿರುವನಂತಪುರಂ(ಕೇರಳ) :ಇಲ್ಲಿನಮಲಪ್ಪುರಂ ಜಿಲ್ಲೆಯಲ್ಲಿ 30 ವರ್ಷಗಳಲ್ಲಿ 60 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ನಿವೃತ್ತ ಶಿಕ್ಷಕನನ್ನು ಬಂಧಿಸಲಾಗಿದ್ದು, ಈ ಘಟನೆಯ ಕುರಿತು ತನಿಖೆಗೆ ಸರ್ಕಾರ ಆದೇಶಿಸಿದೆ. ಮಲಪ್ಪುರಂನ ಸೇಂಟ್ ಜೆಮ್ಮಾಸ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯ ನಿವೃತ್ತ ಶಿಕ್ಷಕ ಹಾಗೂ ಮಲಪ್ಪುರಂ ಪುರಸಭೆಯ ಕೌನ್ಸಿಲ್ ಸದಸ್ಯ ಕೆ.ವಿ. ಶಶಿಕುಮಾರ್ ಬಂಧಿತ ಆರೋಪಿ.
ಪ್ರಕರಣ ಏನು?: ಮೂರು ಬಾರಿಯ ಪುರಸಭೆ ಸದಸ್ಯ, ಸಿಪಿಎಂ ನಾಯಕನಾದ ಶಶಿಕುಮಾರ್ ಮಲಪ್ಪುರಂನ ಸೇಂಟ್ ಜೆಮ್ಮಾಸ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದಾರೆ. ಇದೇ ವರ್ಷದ ಮಾರ್ಚ್ನಲ್ಲಿ ನಿವೃತ್ತರಾಗಿದ್ದಾರೆ. ಇದಕ್ಕೂ ಮೊದಲು ಶಶಿಕುಮಾರ್ ತಮ್ಮ ವೃತ್ತಿ ಜೀವನದ 30 ವರ್ಷಗಳಲ್ಲಿ ಸುಮಾರು 60 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವಿದೆ.
ಶಶಿಕುಮಾರ್ ಶಿಕ್ಷಕನಾಗಿದ್ದ ಶಾಲೆಯ ಹಳೆ ವಿದ್ಯಾರ್ಥಿ ಇವರ ಮೇಲೆ 'ಮೀಟೂ' ಆರೋಪ ಮಾಡಿದ ಬಳಿಕ ಒಂದೊಂದೇ ಆರೋಪಗಳು ಬೆಳಕಿಗೆ ಬಂದಿವೆ. ಬಳಿಕ ಶಶಿಕುಮಾರ್ನಿಂದ ಅನ್ಯಾಯಕ್ಕೊಳಗಾದ ವಿದ್ಯಾರ್ಥಿನಿಯರು ದೂರುಗಳನ್ನು ಸಲ್ಲಿಸಿದ್ದಾರೆ.
ದೂರು ನೀಡಿದ್ರೂ ಕ್ರಮವಿಲ್ಲ:ಇನ್ನು ಶಿಕ್ಷಕ ಶಶಿಕುಮಾರ್ ಶಾಲೆಯಲ್ಲಿ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ದೂರು ನೀಡಿದರೂ ಶಾಲಾ ಆಡಳಿತ ಮಂಡಳಿ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. 2019 ರಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ಈ ಶಿಕ್ಷಕನ ವಿರುದ್ಧ ಮಲಪ್ಪುರಂ ಜಿಲ್ಲಾ ಪೊಲೀಸ್ ಮುಖ್ಯಸ್ಥರನ್ನು ಸಂಪರ್ಕಿಸಿ ದೂರು ನೀಡಿತ್ತು.
ಇದಾದ ಬಳಿಕ ಸಿಪಿಎಂ ಶಾಖಾ ಸಮಿತಿಯ ಸದಸ್ಯ ಸ್ಥಾನದಿಂದ ಶಶಿಕುಮಾರ್ನನ್ನು ಪಕ್ಷ ಉಚ್ಚಾಟಿಸಿತ್ತು. ಬಳಿಕ ಪುರಸಭೆಯ ಕೌನ್ಸಿಲರ್ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಇದೀಗ ಶಿಕ್ಷಕನ ವಿರುದ್ಧ 50 ವಿದ್ಯಾರ್ಥಿನಿಯರು ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಪೊಲೀಸರು ಶಶಿಕುಮಾರ್ನನ್ನು ಬಂಧಿಸಿದ್ದಾರೆ.
ಅಲ್ಲದೇ ಈ ಬಗ್ಗೆ ತನಿಖೆ ನಡೆಸಲು ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಆದೇಶಿಸಿದ್ದಾರೆ. ಶಾಲಾ ಆಡಳಿತ ಮಂಡಳಿಯ ಲೋಪದೋಷಗಳ ಬಗ್ಗೆಯೂ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು ಸೂಚಿಸಿದ್ದಾರೆ. ಇನ್ನು ಶಶಿಕುಮಾರ್ ವಿರುದ್ಧ ಮಲಪ್ಪುರಂ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಓದಿ:ಬೇಸ್ಮೆಂಟ್ ರಾಡ್ ಮೇಲೆ ಬಿದ್ದ ಕೆಲಸಕ್ಕೆ ಬಂದಿದ್ದ ಕೂಲಿ ಕಾರ್ಮಿಕ.. ದವಡೆ ಮೂಲಕ ತಲೆ ಮೇಲಿಂದ ಹಾದು ಹೋದ ಕಬ್ಬಿಣ!