ನವದೆಹಲಿ: ವಿಮಾನಯಾನ ಸಂಸ್ಥೆಗಳು ಕಾಕ್‌ಪಿಟ್ ಮತ್ತು ಕ್ಯಾಬಿನ್‌ನ ಶೇ.50 ರಷ್ಟು ಸಿಬ್ಬಂದಿಯನ್ನು ನಿತ್ಯ ವಿಮಾನಯಾನಕ್ಕೂ ಮುನ್ನ ಆಲ್ಕೋಹಾಲ್ ಪರೀಕ್ಷೆಗೆ ಒಳಪಡಿಸಬೇಕು ಎಂದು ವಿಮಾನಯಾನ ನಿಯಂತ್ರಕ ಡಿಜಿಸಿಎ ಸೂಚನೆ ನೀಡಿದೆ. ಕೋವಿಡ್ ಬರುವುದಕ್ಕೂ ಮೊದಲು ಎಲ್ಲ ಸಿಬ್ಬಂದಿ ಸದಸ್ಯರು ವಿಮಾನ ಹಾರಾಟಕ್ಕೂ ಮುನ್ನ ಆಲ್ಕೋಹಾಲ್ ಪರೀಕ್ಷೆಗಳಿಗೆ ಒಳಗಾಗಬೇಕಾಗಿತ್ತು. ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗ ಈ ಪರೀಕ್ಷೆಗಳನ್ನು ಒಂದೆರಡು ತಿಂಗಳವರೆಗೆ ಸ್ಥಗಿತಗೊಳಿಸಲಾಗಿತ್ತು. ನಂತರ ಪರೀಕ್ಷೆಗಳನ್ನು ಪುನಾರಂಭಿಸಿದರೂ ಸಣ್ಣ ಪ್ರಮಾಣದಲ್ಲಿ ಮಾಡಲಾಗುತ್ತಿದೆ.
ಸಿವಿಲ್ ಏವಿಯೇಷನ್ ಡೈರೆಕ್ಟರೇಟ್ ಜನರಲ್ (ಡಿಜಿಸಿಎ) ನಿನ್ನೆ ಸೂಚನೆ ಹೊರಡಿಸಿದ್ದು, ದೇಶದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಕಡಿಮೆ ಹಾಗೂ ಸಾಮಾನ್ಯ ಸ್ಥಿತಿಗೆ ಮರಳುವ ಪರಿಣಾಮವಾಗಿ ವಾಯು ಸಂಚಾರದ ಪ್ರಮಾಣದಲ್ಲಿ ಹೆಚ್ಚಳದ ದೃಷ್ಟಿಯಿಂದ ಶೇ. 50 ರಷ್ಟು ಸಿಬ್ಬಂದಿ ಈ ಪರೀಕ್ಷೆಗಳಿಗೆ ಒಳಗಾಗುತ್ತಾರೆ ಎಂದು ಉಲ್ಲೇಖಿಸಿದೆ. ಫ್ಲೈಯಿಂಗ್ ತರಬೇತಿ ಸಂಸ್ಥೆಗಳ ಸಂದರ್ಭದಲ್ಲಿ ಶೇ.50 ರಷ್ಟು ಬೋಧಕರು ಮತ್ತು ಶೇ.40 ರಷ್ಟು ವಿದ್ಯಾರ್ಥಿ ಪೈಲಟ್‌ಗಳನ್ನು ನಿತ್ಯ ಪೂರ್ವ - ಫ್ಲೈಟ್ ಬ್ರೀತ್ - ಅನಾಲೈಸರ್‌ಗೆ ಒಳಪಡಿಸಬೇಕು ಎಂದು ಡಿಜಿಸಿಎ ತನ್ನ ಸೂಚನೆಯಲ್ಲಿ ತಿಳಿಸಿದೆ.