ರೋಹ್ತಾಸ್(ಬಿಹಾರ):ಸುಮಾರು 60 ಅಡಿ ಉದ್ದದ ಕಬ್ಬಿಣದ ಸೇತುವೆಯನ್ನು ಕಳ್ಳತನ ಮಾಡಿದ ಆರೋಪದಲ್ಲಿ ಜಲಸಂಪನ್ಮೂಲ ಇಲಾಖೆಯ ಅಧಿಕಾರಿ(ಇಂಜಿನಿಯರ್) ಮತ್ತು ಏಳು ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬಿಹಾರದ ನಸ್ರಿಗಂಜ್‌ನಲ್ಲಿ ನಡೆದಿದೆ. ಹೌದು, ನಸ್ರಿಗಂಜ್ನ ಅಮಿಯಾವರ್ ಗ್ರಾಮದಲ್ಲಿ ಅರ್ರಾ ಕಾಲುವೆಯ ಮೇಲೆ 1972ರಲ್ಲಿ ನಿರ್ಮಾಣ ಮಾಡಲಾಗಿದ್ದ ಸೇತುವೆ ಶಿಥಿಲಗೊಂಡಿದ್ದು, ಅದನ್ನು ಕದ್ದು ಮಾರಾಟ ಮಾಡಿರುವ ಆರೋಪದಲ್ಲಿ ಕೆಲವು ಅಧಿಕಾರಿಗಳು ಸಿಲುಕಿದ್ದಾರೆ.
ನಸ್ರಿಗಂಜ್‌ನಲ್ಲಿ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಯಾದ ರಾಧೇಶ್ಯಾಮ್ ಸಿಂಗ್ ಮತ್ತು ಇತರ ಏಳು ಅಧಿಕಾರಿಗಳ ಮೇಲೆ ಆರೋಪವಿದ್ದು, ಜಲಸಂಪನ್ಮೂಲ ಸಚಿವ ಸಂಜಯ್ ಕುಮಾರ್ ಝಾ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಮೇಲ್ನೋಟಕ್ಕೆ ತಪ್ಪಿತಸ್ಥರೆಂದು ಕಂಡುಬಂದ ಹಿನ್ನೆಲೆಯಲ್ಲಿ ರಾಧೇಶ್ಯಾಮ್ ಸಿಂಗ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ರೋಹ್ತಾಸ್ ಪೊಲೀಸ್ ವರಿಷ್ಟಾಧಿಕಾರಿಯಾದ ಆಶೀಶ್ ಭಾರ್ತಿ ಅವರ ಸ್ಥಳವನ್ನು ಪರಿಶೀಲನೆ ನಡೆಸಿ, ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ನೀರಾವರಿ ಇಲಾಖೆಯ ಎಸ್‌ಡಿಒ ಮತ್ತು ಆರ್‌ಜೆಡಿಯ ಬ್ಲಾಕ್ ಅಧ್ಯಕ್ಷರು ಸೇರಿ ಕಾಲುವೆಯ ಮೇಲೆ ನಿರ್ಮಿಸಿದ 60 ಅಡಿ ಉದ್ದದ ಕಬ್ಬಿಣದ ಸೇತುವೆಯನ್ನು ಕದ್ದು ಮಾರಾಟ ಮಾಡಿದ್ದಾರೆ ಎಂದು ಆಶೀಶ್ ಭಾರ್ತಿ ಮಾಹಿತಿ ಬಹಿರಂಗಪಡಿಸಿದ್ದಾರೆ. ತನಿಖೆಯ ಸಮಯದಲ್ಲಿ ಕದ್ದ ಕಬ್ಬಿಣದ ಸೇತುವೆಯನ್ನು ಅಮಿಯಾವರ್ ಧರ್ಮಕಾಂತದಲ್ಲಿ ತೂಕ ಮಾಡಲಾಗಿತ್ತು ಎಂದು ಪೊಲೀಸರಿಗೆ ತಿಳಿದುಬಂದಿದೆ.
ನೀರಾವರಿ ಇಲಾಖೆಯ ನೌಕರನಾದ ಅರವಿಂದ್ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ಶಿಥಿಲಗೊಂಡ ಸೇತುವೆಯನ್ನು ಕತ್ತರಿಸಲಾಗಿದೆ. ಇದರಲ್ಲಿ ಆರ್‌ಜೆಡಿ ನಾಯಕ ಶಿವ ಕಲ್ಯಾಣ್ ಭಾರದ್ವಾಜ್ ಕೂಡ ಭಾಗಿಯಾಗಿದ್ದಾರೆ. ಸೇತುವೆಯನ್ನು ಕತ್ತರಿಸಲು ದುಷ್ಕರ್ಮಿಗಳು ಜೆಸಿಬಿಗಳು, ಪಿಕಪ್ ವ್ಯಾನ್ಗಳು, ಗ್ಯಾಸ್ ಕಟರ್ಗಳು ಮತ್ತು ವಾಹನಗಳೊಂದಿಗೆ ಆಗಮಿಸಿದ್ದರು. ಮೂರು ದಿನಗಳಲ್ಲಿ ಸಂಪೂರ್ಣ ಸೇತುವೆಯನ್ನು ಕತ್ತರಿಸಿ ಕಣ್ಮರೆಯಾಗಿದ್ದರು. ಇಲಾಖಾ ಅಧಿಕಾರಿಗಳ ನೆಪದಲ್ಲಿ ಸ್ಥಳೀಯ ಇಲಾಖೆಯ ಸಿಬ್ಬಂದಿಯ ಸಹಾಯವನ್ನೂ ಪಡೆದು ಹಗಲು ಹೊತ್ತಿನಲ್ಲಿಯೇ ಸೇತುವೆಯನ್ನು ಕಳ್ಳತನ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಆ ಸೇತುವೆ ಶಿಥಿಲಗೊಂಡಿದ್ದು, ಯಾರೂ ಬಳಸುತ್ತಿರಲಿಲ್ಲ. ಸ್ಥಳೀಯ ಗ್ರಾಮಸ್ಥರು ಇದಕ್ಕೆ ಹೊಂದಿಕೊಂಡಂತೆ ಕಾಂಕ್ರೀಟ್ ಸೇತುವೆಯನ್ನು ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಮದ್ದೂರು : ಎಸ್ಬಿಐ ಬ್ಯಾಂಕಿಗೆ ಸೇರಿದ ಎಟಿಎಮ್ಗೆ ಕನ್ನ-20 ಲಕ್ಷ ರೂ. ದೋಚಿದ ಖದೀಮರು!