ಸೂರತ್ (ಗುಜರಾತ್): ಪಾನಮತ್ತ ಕಾರು ಚಾಲಕನೊಬ್ಬ ತನ್ನ ಕಾರಿನ ಬಾನೆಟ್ ಮೇಲೆ ಯುವಕನೊಬ್ಬನನ್ನು 2 ರಿಂದ 3 ಕಿಲೋ ಮೀಟರ್ವರೆಗೆ ಎಳೆದೊಯ್ದ ಘಟನೆ ಸೂರತ್ ನಗರದ ಪಾಲ್ ಪ್ರದೇಶದಲ್ಲಿ ನಡೆದಿದೆ. ನಗರದ ಗೌರವ್ ಪಥ್ ರಸ್ತೆಯಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು, ಕುಡಿದು ಕಾರು ಚಲಾಯಿಸುತ್ತಿದ್ದವನನ್ನು ದೇವ್ ಧೇರ್ ಎಂದು ಗುರುತಿಸಲಾಗಿದೆ. ವೇಗವಾಗಿ ಕಾರು ಓಡಿಸಿರುವ ಚಾಲಕನ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.
ದೇವ್ ಧೇರ್ ಕಾರಿನ ಬಾನೆಟ್ ಮೇಲೆ ಇದ್ದ ವ್ಯಕ್ತಿ ಕಾರನ್ನು ನಿಲ್ಲಿಸುವಂತೆ ಕೂಗಾಡುತ್ತಿದ್ದರೂ ವೇಗವಾಗಿ ಕಾರು ಚಲಾಯಿಸಿದ್ದಾನೆ. ಧೇರ್ ಕಾರನ್ನೇ ಹಿಂಬಾಲಿಸುತ್ತಿದ್ದ ಇನ್ನೊಂದು ಕಾರಿನ ಡ್ರೈವರ್ ಮೊಬೈಲ್ ಫೋನ್ನಲ್ಲಿ ದೃಶ್ಯವನ್ನು ಸೆರೆ ಹಿಡಿದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕುಡಿದ ಅಮಲಿನಲ್ಲಿ ಕಾರು ಚಾಲಕ 60 ರಿಂದ 70 ಕಿಲೋ ಮೀಟರ್ ವೇಗದಲ್ಲಿ ಚಲಾಯಿಸುತ್ತಿರುವುದನ್ನು ಜೂಮ್ ಮಾಡಲಾಗಿದೆ. ವಿಡಿಯೋದಲ್ಲಿ ಕಾರಿನ ಬಾನೆಟ್ ಮೇಲೆ ಒಬ್ಬ ವ್ಯಕ್ತಿ ಇರುವುದು ಗೋಚರಿಸುತ್ತಿದೆ. ಕಾರನ್ನು ನಿಲ್ಲಿಸಿ ವ್ಯಕ್ತಿಯನ್ನು ಕಾಪಾಡಲು ಹಿಂದಿನಿಂದ ಬೇರೆ ವಾಹಗಳು ಕೂಡ ಹಿಂಬಾಲಿಸುತ್ತಿವೆ. ಆದರೆ ಕಾರಿನ ಚಾಲಕ ಕಾರನ್ನು ನಿಲ್ಲಿಸದೇ ಅದೇ ವೇಗದಲ್ಲಿ ಚಲಾಯಿಸಿದ್ದಾನೆ.
ನಡೆದಿದ್ದೇನು? :ಸೂರತ್ನ ಗೌರವ್ ಪಥ್ ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಇನ್ನೊಂದು ಕಾರಿನ ಚಾಲಕ ಕಾರಿನಿಂದ ಇಳಿದು, ಕುಡಿದು ಡ್ರೈವ್ ಮಾಡುತ್ತಿದ್ದ ದೇವ್ ಧೇರ್ನನ್ನು ಕಾರಿನಿಂದ ಕೆಳಗಿಳಿಯಲು ಹೇಳಿದ್ದಾನೆ. ಆದರೆ ಕುಡಿದ ಅಮಲಿನಲ್ಲಿದ್ದ ಧೇರ್ ಮುಂದೆ ನಿಂತಿದ್ದ ಇನ್ನೊಂದು ಕಾರಿನ ಚಾಲಕನ ಮೇಲೆ ಕಾರು ಚಲಾಯಿಸಲು ಬಂದಿದ್ದಾನೆ. ಆಗ ಮತ್ತೊಬ್ಬ ಕಾರು ಚಾಲಕ ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಕಾರಿನ ಬಾನೆಟ್ ಮೇಲೆ ಹಾರಿದ್ದಾನೆ. ಯುವಕ ಬಾನೆಟ್ ಮೇಲೆ ಇದ್ದರೂ ಅಪಾಯವನ್ನೂ ಲೆಕ್ಕಿಸದೆ ಕುಡಿದ ಅಮಲಿನಲ್ಲಿ ಧೇರ್ ಕಾರು ಚಲಾಯಿಸಿದ್ದಾನೆ.