ಗಯಾ(ಬಿಹಾರ): ತಾನು ಸಾಕಿದ ನಾಯಿ ಬೆಳಗ್ಗೆ ತನ್ನೊಂದಿಗೆ ವಾಕ್ ಮಾಡಲಿಲ್ಲ ಎಂದು ಕೋಪಗೊಂಡ ಮಾಲೀಕ ನಾಯಿಯನ್ನು ಸರಪಳಿಯಿಂದ ಬೈಕ್ನ ಹಿಂಭಾಗಕ್ಕೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದಿರುವ ಅಮಾನುಷ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ. ಕಿಲೋಮೀಟರ್ ದೂರ ಬೈಕ್ನಲ್ಲಿ ಎಳೆದೊಯ್ಯುತ್ತಿರುವುದನ್ನು ನೋಡಿದ ಕಾರು ಸವಾರನೊಬ್ಬ ನಾಯಿಯ ಮಾಲೀಕನನ್ನು ಏನು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದಾಗ ಯಾವುದೇ ನಾಚಿಕೆಯಿಲ್ಲದೇ ನಾಯಿಯನ್ನು ಎಳೆದೊಯ್ಯುತ್ತಿದ್ದೇನೆ ಎಂದು ಉತ್ತರಿಸಿದ್ದಾನೆ.
ಸ್ವಲ್ಪ ದೂರದವರೆಗೆ ಓಡಿಕೊಂಡು ಬಂದಿರುವ ನಾಯಿ, ನಂತರ ಅಸ್ವಸ್ಥಗೊಂಡಿದೆ. ಅಸ್ವಸ್ಥಗೊಂಡಿದ್ದರೂ ಎಳೆದುಕೊಂಡೇ ಮಾಲೀಕ ಬೈಕ್ನಲ್ಲಿ ಸಾಗಿದ್ದಾನೆ. ಅಸ್ವಸ್ಥಗೊಂಡಿದ್ದ ನಾಯಿ ರಕ್ತದಲ್ಲಿ ತೊಯ್ದು ಹೋಗಿದೆ. ಈ ಸಂಪೂರ್ಣ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ತಾನೇ ಮುದ್ದಿನಿಂದ ಸಾಕಿದ ನಾಯಿಯನ್ನು ಈ ರೀತಿ ಅಮಾನವೀಯವಾಗಿ ಎಳೆದೊಯ್ಯಲು ಆತನಿಗೆ ಮನಸ್ಸು ಬರುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಲೀಕನ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಗಯಾ ನಗರದ ಗಾಂಧಿ ಮೈದಾನದಲ್ಲಿ ನಡೆದಿದೆ. ಮಾತು ಬಾರದ ಮೂಕ ಪ್ರಾಣಿ, ಅಸ್ವಸ್ಥಗೊಂಡು ಸಾಯುವ ಸ್ಥಿತಿ ತಲುಪಿದೆ. ಇನ್ನೂ ಸ್ವಲ್ಪ ಹೆಚ್ಚು ಹೊತ್ತು ಹಾಗೆಯೇ ಎಳೆದೊಯ್ದಿದ್ದರೆ ನಾಯಿ ಪ್ರಾಣವನ್ನೇ ಕಳೆದುಕೊಳ್ಳುತ್ತಿತ್ತು. ನಾಯಿಯ ಮುಖ, ಕಾಲು ಸೇರಿದಂತೆ ದೇಹದ ಕೆಲವು ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ನಾಯಿಯನ್ನು ಈ ರೀತಿ ರಸ್ತೆಯಲ್ಲಿ ಎಳೆದೊಯ್ದವರು ಡೆಲ್ಹಾ ನಿವಾಸಿ ಎಂದು ಹೇಳಲಾಗಿದೆ. ಇಲ್ಲಿ ಬೈಕ್ ಸವಾರನನ್ನು ತಡೆದು ನಾಯಿಯ ಪ್ರಾಣ ಉಳಿಸಿರುವ ಕಾರು ಸವಾರನ ದೊಡ್ಡತನಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ವೀಡಿಯೋ ಮಾಡಿದ ಕಾರು ಚಾಲಕ: ನಾಯಿಯನ್ನು ಬೈಕ್ನಲ್ಲಿ ಕಟ್ಟಿ ಎಳೆದೊಯ್ಯುತ್ತಿರುವ ದೃಶ್ಯವನ್ನು ನೋಡಿದ ಕಾರು ಸವಾರ ವೀಡಿಯೋ ಮಾಡಿದ್ದಾನೆ. ನಾಯಿಯ ಮಾಲೀಕನನ್ನು ತರಾಟೆಗೆ ತೆಗೆದುಕೊಂಡಿರುವ ಕಾರು ಸವಾರ ನಾಯಿಯನ್ನು ಹತ್ತಿರದ ಜಾಗದಲ್ಲಿ ಕಟ್ಟಿ ಹಾಕಿ ಚಿಕಿತ್ಸೆ ಕೊಡಿಸುವಂತೆ ಬೈಕ್ ಸವಾರನಿಗೆ ತಿಳಿಸಿದ್ದಾನೆ. ನಾಯಿ ಮಾಲೀಕ ಮಾತ್ರ ತಾನು ಮಾಡಿರುವ ಅಮಾನವೀಯ ಕೃತ್ಯದ ಬಗ್ಗೆ ಕೊಂಚವೂ ನಾಚಿಕೆ ಪಡದೇ, ನಾಯಿ ತನ್ನೊಂದಿಗೆ ಬೆಳಗ್ಗೆ ನಾಯಿ ವಾಕ್ ಬರಲಿಲ್ಲ ಎಂಬುದರ ಬಗ್ಗೆಯೇ ಮಾತನಾಡುತ್ತಿದ್ದನು. ಈ ವೇಳೆ ಸುತ್ತಮುತ್ತಲಿನ ಜನ ಜಮಾಯಿಸಿದ್ದು, ನಾಯಿ ಮಾಲೀಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾಯಿಗೆ ಏನಾದರೂ ತೊಂದರೆಯಾದರೆ ದೂರು ನೀಡುವುದಾಗಿ ಸೂಚಿಸಿದ್ದಾರೆ.