ಹೈದರಾಬಾದ್: ಇಂದು ವೈಕುಂಠ ಏಕಾದಶಿ. ಶ್ರೀ ವಿಷ್ಣು ದೇವರಿಗೆ ಪ್ರಿಯವಾದ ದಿನ. ಧನುರ್ಮಾಸ ಶುಕ್ಲ ಪಕ್ಷದಲ್ಲಿ ಬರುವ ಈ ವೈಕುಂಠ ಏಕಾದಶಿಯಂದು ದೇವತೆಗಳು ಭೂ ಲೋಕಕ್ಕೆ ಬಂದು ಜಗದೊಡೆಯ ಶ್ರೀವಿಷ್ಣು ದೇವರನ್ನು ಪೂಜಿಸುತ್ತಾರೆ ಎಂದು ಪುರಾಣಗಳು ಹೇಳುತ್ತವೆ. ಆದುದರಿಂದಲೇ ಈ ದಿನದಂದು ದೇವಾಲಯದ ಉತ್ತರ ದ್ವಾರದ ಮೂಲಕ ವಿಷ್ಣುವಿನ ದರ್ಶನ ಮಾಡಿದರೆ ಸಕಲ ಪುಣ್ಯಗಳು ಪ್ರಾಪ್ತಿಯಾಗುತ್ತವೆ ಎಂಬುದು ನಂಬಿಕೆ.
ವಿಷ್ಣು ದೇವರಿಗೆ ಪ್ರಿಯವಾದ ಈ ಪವಿತ್ರ ದಿನದಂದು ಬಹುತೇಕ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ಅದರಲ್ಲೂ ತಮಿಳುನಾಡಿನ ತಿರುಚನಪಲ್ಲಿಯ ಶ್ರೀರಂಗನಾಥ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವೈಕುಂಠ ದ್ವಾರದ ಮೂಲಕ ಸಾಗಿ ದೇವರ ದರ್ಶನ ಪಡೆಯಲು ಭಕ್ತರು ಸಾಲುಗಟ್ಟಿ ನಿಂತಿದ್ದಾರೆ.
ತಿರುಮಲದಲ್ಲಿ ವೈಕುಂಠ ಏಕಾದಶಿ: ತಿರುಪತಿಯ ತಿರುಮಲದಲ್ಲೂ ವೈಕುಂಠ ಏಕಾದಶಿ ಕಳೆಗಟ್ಟಿದೆ. ಲಕ್ಷಾಂತರ ಭಕ್ತರು ತಿರಮಲಕ್ಕೆ ಆಗಮಿಸಿದ್ದು ವೈಕುಂಠ ದ್ವಾರದ ಮೂಲಕ ಸಾಗಿ ಏಳು ಬೆಟ್ಟಗಳ ಒಡೆಯ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಬೆಳಗಿನಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇಂದು ಬೆಳಗಿನ ಜಾವ 1.45ಕ್ಕೆ ತಿರುಮಲದಲ್ಲಿ ವೈಕುಂಠ ದ್ವಾರ ತೆರೆಯಲಾಗಿದೆ.
ತಿರುಮಲಕ್ಕೆ ಗಣ್ಯರ ಆಗಮನ: ವೈಕುಂಠ ದ್ವಾರದ ಮೂಲಕ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಅನೇಕ ಗಣ್ಯರು ತಿರುಮಲಕ್ಕೆ ಆಗಮಿಸಿದ್ದಾರೆ. ನಿವೃತ್ತ ಸಿಜೆಐ ನ್ಯಾಯಮೂರ್ತಿ ಎನ್‌ವಿ ರಮಣ, ಹೈಕೋರ್ಟ್ ನ್ಯಾಯಮೂರ್ತಿ ರವೀಂದ್ರ ಬಾಬು, ನ್ಯಾಯಮೂರ್ತಿ ಹಿಮಾ ಕೊಹ್ಲಿ, ನ್ಯಾಯಮೂರ್ತಿ ಎಸ್.ಎಲ್. ಭಟ್ಟಿ, ನ್ಯಾಯಮೂರ್ತಿ ಶ್ಯಾಮ್ ಸುಂದರ್, ನ್ಯಾಯಮೂರ್ತಿ ತರಳ ರಾಜಶೇಖರ್, ಕರ್ನಾಟಕ ರಾಜ್ಯಪಾಲ ಧವರ್ ಚಂದ್ ಗೆಹ್ಲೋಟ್ ಸೇರಿದಂತೆ ಅನೇಕ ಗಣ್ಯರು ತಿರುಮಲನ ದರ್ಶನಕ್ಕೆ ಆಗಮಿಸಿದ್ದಾರೆ.