ಕರ್ನಾಟಕ

karnataka

By

Published : Nov 28, 2020, 8:58 PM IST

Updated : Nov 28, 2020, 10:51 PM IST

ETV Bharat / bharat

ಪುಣೆಯ ಸೆರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾಗೆ ಮೋದಿ ಭೇಟಿ: ಕೋವಿಡ್‌ ಲಸಿಕೆ ಪ್ರಗತಿ ಕುರಿತು ಪರಿಶೀಲನೆ

ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಸಂಸ್ಥೆಯಲ್ಲಿ ಕೋವಿಡ್‌ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ತಂಡದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಿದ್ದಾರೆ. ಪುಣೆಯ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಕೋವಿಡ್‌ ಲಸಿಕೆಯ ಪ್ರಗತಿ ಪರಿಶೀಲನೆ ಬಳಿಕ ಪ್ರಧಾನಿ ಮೋದಿ ಟ್ವೀಟ್​ ಮಾಡಿ ವಿಷಯ ತಿಳಿಸಿದ್ದಾರೆ.

Details of PM Modi's Serum (Pune) Visit
ಕೋವಿಡ್‌ ಲಸಿಕೆಯ ಪ್ರಗತಿ ಪರಿಶೀಲನೆ

ಪುಣೆ: ಕೋವಿಡ್​-19 ಲಸಿಕೆಯ ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆಯಲು ಪ್ರಧಾನಿ ನರೇಂದ್ರ ಮೋದಿ ನಿರೀಕ್ಷೆಯಂತೆ ಇಂದು (ಶನಿವಾರ) ಪುಣೆಯ ಪ್ರತಿಷ್ಠಿತ ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ (ಎಸ್‌ಐಐ)ಗೆ ಭೇಟಿ ನೀಡಿದರು. ಭೇಟಿ ಬಳಿಕ ಕೊರೊನಾ ಸೋಂಕಿನ ವಿರುದ್ಧ ಅಭಿವೃದ್ಧಿಪಡಿಸಲಾಗುತ್ತಿರುವ ಕೋವಿಡ್‌ ಲಸಿಕೆಯ ಪ್ರಗತಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಕೋವಿಡ್ 19 ಲಸಿಕೆ ಅಭಿವೃದ್ಧಿ ಬಗ್ಗೆ ತಿಳಿಯಲು ಇಂದು ಎಸ್‌ಐಐ​, ಭಾರತ್​ ಬಯೋಟೆಕ್​ಗೆ ಮೋದಿ ಭೇಟಿ

ಇಂದು ಸಂಜೆ 4 ಗಂಟೆ ಸುಮಾರಿಗೆ ತಮ್ಮ ವಿಶೇಷ ವಿಮಾನದಲ್ಲಿ ಹೈದರಾಬಾದ್​​ನಿಂದ ಪುಣೆ ವಿಮಾನ ನಿಲ್ದಾಣ ತಲುಪಿದ ಪ್ರಧಾನಿ ಮೋದಿ ಅವರನ್ನು ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಸಂಸ್ಥೆಯ ಅಧಿಕಾರಿಗಳು ಬರಮಾಡಿಕೊಂಡರು. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ನೇರವಾಗಿ ಸೆರಂ ಸಂಸ್ಥೆಗೆ ತೆರಳಿದರು. ಸೆರಂ ಸಂಸ್ಥೆಯ ಕ್ಯಾಂಪಸ್ ಒಳಗೆ ಹೆಲಿಕಾಪ್ಟರ್​ ಲ್ಯಾಂಡ್​ ಮಾಡಲಾಯಿತು.

ಸೈರಸ್ ಪೂನವಾಲಾ, ಆದರ್ ಪೂನವಾಲಾ, ನತಾಶಾ ಪೂನವಾಲಾ ಮತ್ತು ಸೆರಂ ಸಂಸ್ಥೆಯ ಉನ್ನತ ಅಧಿಕಾರಿಗಳು ಪ್ರಧಾನಿಗಳನ್ನು ಸ್ವಾಗತಿಸಿದರು. ಈ ವೇಳೆ ಆದರ್ ಪೂನವಾಲಾ ಪ್ರಧಾನಿ ಮೋದಿ ಅವರನ್ನು ಲಸಿಕಾ ತಯಾರಿಕಾ ಘಟಕದತ್ತ ಕರೆದೊಯ್ದು ಅದರ ಅಭಿವೃದ್ಧಿ ಕುರಿತು ವಿವರಣೆ ನೀಡಿದರು. ಈ ವೇಳೆ ಸೆರಂ ಸಂಸ್ಥೆಯಲ್ಲಿ ಕೋವಿಡ್‌ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿರುವ ತಂಡದೊಂದಿಗೆ ಮೋದಿ ಸಂವಾದ ನಡೆಸಿದರು.

ಇದನ್ನೂ ಓದಿ: 30 ಮಿಲಿಯನ್ ಡೋಸ್ ಕೋವಿಡ್ ವ್ಯಾಕ್ಸಿನ್ ಪಡೆಯಲು ಭಾರತದೊಂದಿಗೆ ಬಾಂಗ್ಲಾ ಒಪ್ಪಂದ

ಸಂಜೆ 6 ಗಂಟೆ ಸುಮಾರಿಗೆ ಪುಣೆ ವಿಮಾನ ನಿಲ್ದಾಣಕ್ಕೆ ಮರಳಿದ ಪ್ರಧಾನಿ ಮೋದಿ, ಅಲ್ಲಿಂದ ತಮ್ಮ ವಿಶೇಷ ವಿಮಾನದ ಮೂಲಕ ದೆಹಲಿಯತ್ತ ತೆರಳಿದರು. ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಸಂಸ್ಥೆಯಲ್ಲಿ ಕೋವಿಡ್‌ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ತಂಡದೊಂದಿಗೆ ಸಂವಾದ ನಡೆಸಿರುವುದಾಗಿ ಮೋದಿ ಟ್ವೀಟ್​ ಮಾಡಿ ತಿಳಿಸಿದ್ದಾರೆ.

ಪುಣೆಗೆ ತೆರಳುವುದಕ್ಕೂ ಮುನ್ನ ಅಹಮದಾಬಾದ್‌ನ ಜೈಡಸ್‌ ಕ್ಯಾಡಿಲಾ ಸಂಸ್ಥೆಯ ಉತ್ಪಾದನಾ ಘಟಕ ಮತ್ತು ಹೈದರಾಬಾದ್ ಭಾರತ್ ಬಯೋಟೆಕ್ ಘಟಕಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದರು.

ಕೋವಿಡ್‌ ಲಸಿಕೆಯ ಪ್ರಗತಿ ಪರಿಶೀಲನೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ
Last Updated : Nov 28, 2020, 10:51 PM IST

ABOUT THE AUTHOR

...view details