ವಿಶ್ವದ ಅನೇಕ ರಾಷ್ಟ್ರಗಳು ಕೊರೊನಾ ವಿರುದ್ಧದ ಹೋರಾಟದಲ್ಲಿ ನಿರತರಾಗಿದ್ದರೆ ದೇಶದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರದ ವಿರುದ್ಧ ಆಕ್ರಮಣ ನಡೆಸುವ ಹಳೆಯ ಚಾಳಿಗೆ ಮ್ಯಾನ್ಮಾರ್ ಸೈನ್ಯ ಮರಳಿತು.
ಕಳೆದ ನವೆಂಬರ್‌ನಲ್ಲಿ ನಡೆದ ಸಂಸತ್ ಚುನಾವಣೆ ವೇಳೆ ಸಂಪೂರ್ಣ ಬಹುಮತ ಗಳಿಸಿದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿಯನ್ನು ಅಕ್ಷರಶಃ ರಾಜಕೀಯ ಕೈದಿಯನ್ನಾಗಿ ಮಾಡಲಾಗಿದೆ.
ಅಲ್ಲಿನ ಅಧ್ಯಕ್ಷ ವಿನ್‌ಮ್ಯಿಂಟ್, ಸ್ಟೇಟ್ ಕೌನ್ಸೆಲರ್ ಆಂಗ್ ಸನ್ ಸೂಕಿ ಮತ್ತಿತರ ಎಲ್ಲಾ ನಿರ್ಣಾಯಕ ನಾಯಕರನ್ನು ಹಾಗೂ ದೇಶದ ಪ್ರತಿಭಟನೆಯ ಎಲ್ಲಾ ಧ್ವನಿಗಳನ್ನು ಇದು ತನ್ನ ಉಕ್ಕಿನ ಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿತು. ಒಂದೂವರೆ ತಿಂಗಳ ಅವಧಿಯಲ್ಲಿ ಸೇನಾ ಕ್ರಮವನ್ನು ಪ್ರತಿಭಟಿಸಿದ ಅಂದಾಜು 180 ಜನರನ್ನು ಕೊಲ್ಲಲಾಯಿತು.
2015ರ ಚುನಾವಣೆಯಲ್ಲಿ ಸೋತ ಸೇನಾ ಬೆಂಬಲಿತ ಯೂನಿಯನ್ ಸಾಲಿಡಾರಿಟಿ ಅಂಡ್ ಡೆವಲಪ್‌ಮೆಂಟ್ (ಯುಎಸ್ಡಿಪಿ) ಪಕ್ಷವನ್ನು ಬೆಂಬಲಿಸದೇ ಹೋದರೆ ರಕ್ತಪಾತ ಉಂಟಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.
ಜನ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಸೂಕಿ ಅವರ ಪಕ್ಷಕ್ಕೆ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮತ ನೀಡಿದರು. 2015ರ ಚುನಾವಣೆಯಲ್ಲಿ ದೊರೆತದ್ದಕ್ಕಿಂತಲೂ ಅಭೂತಪೂರ್ವ ಸಾರ್ವಜನಿಕ ಬೆಂಬಲ ಸೂಕಿ ಪಾಳೆಯಕ್ಕೆ ದೊರೆಯಿತು.
ಸೂಕಿ ಅವರು ಎಲ್ಲಿ ಸಾಂವಿಧಾನಿಕ ತಿದ್ದುಪಡಿ ಮಾಡಿಬಿಡುವರೋ ಎಂಬ ಭಯ ಮತ್ತು ಅನುಮಾನ ಬರ್ಮಾದ ಸೇನಾ ಜನರಲ್ ಮಿನ್ ಆಂಗ್ ಅವರು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರದ ವಿರುದ್ಧ ದಂಗೆ ಏಳುವಂತೆ ಮಾಡಿದೆ ಎಂದು ತೋರುತ್ತದೆ.
65 ವರ್ಷಗಳ ಆಡಳಿತದ ಬಳಿಕ ಬರುವ ಜುಲೈನಲ್ಲಿ ತನ್ನ ಸ್ಥಾನದಿಂದ ನಿವೃತ್ತಿಯಾದ ಮೇಲೆ ರೋಹಿಂಗ್ಯಾ ವಿರೋಧದ ಬಗ್ಗೆ ಅಂತಾರಾಷ್ಟ್ರೀಯ ತನಿಖೆ ಎದುರಿಸಬೇಕಾಗಬಹುದು ಎಂಬ ಆತಂಕದಲ್ಲಿ ನಡೆದ ಸೇನಾ ದಂಗೆ ಮ್ಯಾನ್ಮಾರ್ ಭವಿಷ್ಯವನ್ನು ಬದಲಾವಣೆ ಮಾಡಿದೆ.
ಸೇನೆಯ ಹದ್ದು ಮೀರಿದ ವರ್ತನೆಯಿಂದಾಗಿ ಪ್ರತಿಭಟನಾಕಾರರು ಸುರಿಸುತ್ತಿರುವ ರಕ್ತ ಮ್ಯಾನ್ಮಾರ್‌ನ ಬೀದಿಗಳನ್ನು ಕೆಂಪು ಬಣ್ಣಕ್ಕೆ ತಿರುಗಿಸಿದೆ. ಅಧಿಕಾರಕ್ಕೆ ಅಂಟಿಕೊಳ್ಳುವ ಮೂಲಕ ಮಿಲಿಟಿರಿ ಜನರಲ್ ಅವರು ಯಾವುದೇ ತನಿಖೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಬಹುದು ಎಂಬ ಕುರುಡು ನಂಬಿಕೆಯಿಂದಾಗಿ ಪ್ರಜಾಪ್ರಭುತ್ವಕ್ಕೆ ದೊಡ್ಡ ಹಿನ್ನಡೆ ಉಂಟಾಗಿದೆ. ಅದರ ಸ್ಥಿತಿ ಹಾವಿನ ನೆರಳಿನಲ್ಲಿ ಇರುವ ಕಪ್ಪೆಯಂತೆ ಆಗಿದೆ.
ಭಾರತ ಸ್ವಾತಂತ್ರ್ಯ ಪಡೆದ ಒಂದು ವರ್ಷದಲ್ಲೇ ಮ್ಯಾನ್ಮಾರ್ (ಹಿಂದೆ ಇದನ್ನು ಬರ್ಮ ಎಂದು ಕರೆಯಲಾಗುತ್ತಿತ್ತು) ಕೂಡ ಬ್ರಿಟಿಷರ ಬಿಗಿ ಹಿಡಿತದಿಂದ ಸ್ವಾತಂತ್ರ್ಯ ಪಡೆಯಿತು. ಆದರೆ, 1962ರಿಂದ ದಶಕಗಳ ಕಾಲ ಅದು ಸೇನಾ ಆಡಳಿತದಲ್ಲೇ ಉಳಿಯಿತು.
1990ರಲ್ಲಿ ನಡೆದ ನಡೆದ ಚುನಾವಣೆಯಲ್ಲಿ ಸೇನಾ ಒಳಸಂಚಿನ ಪರಿಣಾಮವಾಗಿ ಎನ್‌ಎಲ್‌ಡಿ ಬಹುಮತಗಳಿಸಿತ್ತು. ಆದರೂ ಅಂದಿನ ಮಿಲಿಟರಿ ಆಡಳಿತ ಸಂವಿಧಾನ ಇಲ್ಲದೆ ಅಧಿಕಾರ ವರ್ಗಾಯಿಸಲು ಆಗದು ಎಂಬ ನೆಪ ಹೂಡಿ ಅಧಿಕಾರ ನೀಡಲಾಯಿತು.
ಅಂದು ನಡೆದ ಒಳಸಂಚು ಪ್ರಜಾಪ್ರಭುತ್ವದ ಬೆಂಬಲಿಗರೆಲ್ಲರನ್ನೂ ಜೈಲಿಗೆ ಹಾಕಿತು. ಮೂರು ದಶಕಗಳ ಹಿಂದೆ ಏನು ನಡೆದಿತ್ತೋ ಅದೇ ಇತ್ತೀಚಿನ ಸೇನಾ ದಂಗೆಯ ಸಂದರ್ಭದಲ್ಲಿಯೂ ಪುನರಾವರ್ತನೆ ಆಯಿತು. ಮ್ಯಾನ್ಮಾರ್‌ನ ಮಿಲಿಟರಿ ದುರಾಕ್ರಮಿಗಳು ಒಂದು ವರ್ಷದ ತುರ್ತು ಪರಿಸ್ಥಿತಿ ಹೇರಿದ್ದಾರೆ.
ಪರವಾನಿಗೆ ಪಡೆಯದ ವಾಕಿ-ಟಾಕಿಗಳನ್ನು ಹೊಂದಿದ್ದಕ್ಕಾಗಿ ಸೂಕಿ ಅವರನ್ನು ಬಂಧಿಸಲಾಗಿದೆ. ಕೊರೊನಾ ನಿಯಮಗಳ ಉಲ್ಲಂಘನೆ ಮಾಡಿದ್ದಾರೆ ಎಂಬುದು ಆಕೆಯ ವಿರುದ್ಧ ಇರುವ ಮತ್ತೊಂದು ಆರೋಪ. ಭ್ರಷ್ಟಾಚಾರದ ಆರೋಪ ಹೊರಿಸುತ್ತ ಆಕೆಯ ಸುತ್ತಲಿನ ಕುಣಿಕೆಯನ್ನು ಬಿಗಿ ಮಾಡಲಾಗಿದೆ.
ಮ್ಯಾನ್ಮಾರ್‌ನ ಮಿಲಿಟರಿ ನಾಯಕರ ವಿರುದ್ಧ ಅಮೆರಿಕ, ಬ್ರಿಟನ್ ಹಾಗೂ ಕೆನಡಾ ನಿರ್ಬಂಧಗಳನ್ನು ಹೇರಿದೆ. ಮ್ಯಾನ್ಮಾರ್‌ಗೆ ಶಸ್ತ್ರಾಸ್ತ್ರ ಮಾರಾಟ ಸ್ಥಗಿತಗೊಳಿಸುವುದಾಗಿ ದಕ್ಷಿಣ ಕೊರಿಯಾ ಘೋಷಣೆ ಮಾಡಿದೆ. ಬಿಕ್ಕಟ್ಟನ್ನು ಪರಿಹರಿಸಲು ಇಂಡೋನೇಷ್ಯಾ ರಾಜತಾಂತ್ರಿಕ ಕ್ರಮಗಳಿಗೆ ಮುಂದಾಗಿದ್ದರೆ ಚೀನಾ ಎಚ್ಚರಿಕೆಯ ನಿಲುವು ತಳೆದಿದೆ.
ಚೀನಾ ಇತ್ತೀಚೆಗೆ ಸೇನಾ ಕಾಯಿದೆಗೆ ತಿದ್ದುಪಡಿ ತಂದು ಚೀನಿಯರ ಹಿತಾಸಕ್ತಿಯನ್ನು ರಕ್ಷಿಸಲು ಪೀಪಲ್ಸ್ ಲಿಬರೇಷನ್ ಆರ್ಮಿ ಇತರೆ ದೇಶಗಳನ್ನು ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಚೀನಾದ ನಡೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಮ್ಯಾನ್ಮಾರ್‌ನಲ್ಲಿ ಉಂಟಾಗಿರುವ ಅರಾಜಕತೆ ಹಿನ್ನೆಲೆ ದೇಶದ ಈಶಾನ್ಯ ಭಾಗದಲ್ಲಿ ಯಾವುದೇ ದಂಗೆ ತಡೆಯಲು ಭಾರತ ಸರ್ಕಾರ ಹದ್ದಿನ ಕಣ್ಣು ಇಡಬೇಕಾಗಿದೆ.
ಮ್ಯಾನ್ಮಾರ್ ನಾಗರಿಕರ ಶ್ರೇಯೋಭಿವೃದ್ಧಿಯನ್ನು ರಕ್ಷಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ನಾಯಕತ್ವದ ಪಾತ್ರ ವಹಿಸಬೇಕಿದೆ. ದಶಕಗಳಿಂದ ಅನುಭವಿಸುತ್ತಿರುವ ಒಂಟಿತನ ಮತ್ತು ಸಹಿಸಲಸಾಧ್ಯವಾದ ಬಡತನದ ವಿರುದ್ಧ ಜಯಶಾಲಿಯಾಗ ಬೇಕಾದರೆ ಅಂತಾರಾಷ್ಟ್ರೀಯ ಬೆಂಬಲದೊಂದಿಗೆ ಅಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಬೇಕಾದ ಅಗತ್ಯ ಇದೆ.