ಕರ್ನಾಟಕ

karnataka

ETV Bharat / bharat

ರೆವಿನ್ಯೂ ಸ್ಟ್ಯಾಂಪ್‌ ಮಾದರಿಯಲ್ಲಿ ಅಪಾಯಕಾರಿ ಡ್ರಗ್‌ ಸೇಲ್: 2 ದಶಕದಲ್ಲೇ ಅತಿ ದೊಡ್ಡ ಜಾಲ ಭೇದಿಸಿದ ಎನ್‌ಸಿಬಿ

ಭಾರಿ ಪ್ರಮಾಣದ ಎಲ್​​ಎಸ್​ಡಿ ಮಾದಕ ದ್ರವ್ಯ ಕಳ್ಳಸಾಗಣೆ ಜಾಲವನ್ನು ಎನ್‌ಸಿಬಿ ಅಧಿಕಾರಿಗಳು ಪತ್ತೆ ಹಚ್ಚಿ ಓರ್ವ ವಿದ್ಯಾರ್ಥಿನಿ ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ.

By

Published : Jun 6, 2023, 4:39 PM IST

crime-ncb-busts-pan-india-darknet-lsd-trafficking-network-students-among-six-arrested
ಎಲ್​​ಎಸ್​ಡಿ ಮಾದಕ ದ್ರವ್ಯ ಕಳ್ಳಸಾಗಣೆ ಜಾಲ ಪತ್ತೆ: ಓರ್ವ ವಿದ್ಯಾರ್ಥಿನಿ ಸೇರಿ ಆರು ಜನರ ಸೆರೆ

ನವದೆಹಲಿ:ಅಂತಾರಾಜ್ಯ ಲೈಸರ್ಜಿಕ್ ಆ್ಯಸಿಡ್ ಡೈಥೈಲಾಮೈಡ್ ಅಥವಾ ಎಲ್​​ಎಸ್​ಡಿ ಮಾದಕ ದ್ರವ್ಯ ಕಳ್ಳಸಾಗಣೆಯ ಜಾಲವನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಪತ್ತೆ ಹಚ್ಚಿದೆ. ಇದೇ ಮೊದಲ ಬಾರಿಗೆ ಕೋಟ್ಯಂತರ ಮೌಲ್ಯದ 15 ಸಾವಿರ ಎಲ್‌ಎಸ್‌ಡಿ ಬ್ಲಾಟ್‌ಗಳನ್ನು ವಶಪಡಿಸಿಕೊಂಡು ಓರ್ವ ವಿದ್ಯಾರ್ಥಿನಿ ಸೇರಿ ಆರು ಮಂದಿಯನ್ನು ಬಂಧಿಸಲಾಗಿದೆ. ಕಾಳದಂಧೆಗೆ ಕ್ರಿಪ್ಟೋಕರೆನ್ಸಿಯನ್ನು ಬಳಸಿದ ಆರೋಪ ಬಯಲಿಗೆ ಬಂದಿದೆ.

ಬಂಧಿತ ಯುವತಿ ನೋಯ್ಡಾದ ಖಾಸಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ. ಜೈಪುರ ಮೂಲದ ಓರ್ವ ಮಾಸ್ಟರ್‌ಮೈಂಡ್​ ಸಹ ಬಲೆಗೆ ಬಿದ್ದಿದ್ದಾನೆ. ಇದೊಂದು ಪ್ಯಾನ್​ ಇಂಡಿಯಾ ಮಾದಕ ದ್ರವ್ಯ ಕಳ್ಳಸಾಗಣೆ ಜಾಲವಾಗಿದ್ದು, ಅಂತಾರಾಷ್ಟ್ರೀಯ ನಂಟು ಹೊಂದಿರುವ ಬಗ್ಗೆಯೂ ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ಲಭ್ಯವಾಗಿದೆ. ಸದ್ಯ ಎಲ್‌ಎಸ್‌ಡಿಯ ವಾಣಿಜ್ಯ ಪ್ರಮಾಣವು ಆರು ಬ್ಲಾಟ್‌ (ಬ್ಲಾಟ್​ ಎಂದರೆ ಅರ್ಧ ಪೋಸ್ಟಲ್​ ಸ್ಟಾಂಪ್​ನಷ್ಟು) ಆಗಿದ್ದು, ಈಗ ಜಪ್ತಿ ಮಾಡಿರುವ 15 ಸಾವಿರ ಎಲ್‌ಎಸ್‌ಡಿ ಬ್ಲಾಟ್​ ಅಂದಾಜು 2,500 ಪಟ್ಟು ಹೆಚ್ಚು. ಇದೊಂದು ಸಂಶ್ಲೇಷಿತ ಮಾದಕ ದ್ರವ್ಯವಾಗಿದ್ದು, ತುಂಬಾ ಅಪಾಯಕಾರಿಯಾಗಿದೆ. ಇದು ಕಳೆದ 2 ದಶಕಗಳಲ್ಲೇ ಅತಿ ದೊಡ್ಡ ಜಪ್ತಿಯಾಗಿದೆ. ಅಂಚೆ ಚೀಟಿಗಳನ್ನು ಹೋಲುವ ಈ ಬ್ಲಾಟ್‌ಗಳನ್ನು ಯಾವುದೇ ಸಂಶಯಕ್ಕೆ ಎಡೆಮಾಡದೆ ಎಲ್ಲಿ ಬೇಕಾದರೂ ಮರೆಮಾಚಬಹುದು. ಹೀಗಾಗಿ ಇದನ್ನು ಪತ್ತೆ ಹಚ್ಚುವುದು ಬಹಳ ಕಷ್ಟ ಎಂದು ಎನ್‌ಆರ್ ಉಪ ಮಹಾನಿರ್ದೇಶಕ (ಡಿಡಿಜಿ) ಜ್ಞಾನೇಶ್ವರ್ ಸಿಂಗ್ ತಿಳಿಸಿದ್ದಾರೆ.

ಇದರ ಜೊತೆಗೆ ಗಾಂಜಾ, 4.55 ಲಕ್ಷ ನಗದು ಪತ್ತೆಯಾಗಿದೆ. ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 20 ಲಕ್ಷ ರೂ. ಹಣ ಜಪ್ತಿಯಾಗಿದೆ. ಎಲ್ಲ ಆರೋಪಿಗಳು ಡಾರ್ಕ್‌ನೆಟ್‌ನಲ್ಲಿ ಸಕ್ರಿಯರಾಗಿ ಡ್ರಗ್ಸ್ ಮಾರಾಟದಲ್ಲಿ ತೊಡಗಿಸಿಕೊಂಡಿದ್ದರು. ಸಂಪೂರ್ಣ ಜಾಲವನ್ನು ಪತ್ತೆ ಹಚ್ಚಳು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಪೋಲೆಂಡ್ ಮತ್ತು ನೆದರ್‌ಲ್ಯಾಂಡ್‌ನಿಂದ ಎಲ್‌ಎಸ್‌ಡಿ ಸಾಗಾಟವಾದ ಮಾಹಿತಿ ಲಭ್ಯವಾಗಿದೆ. ದಂಧೆಯ ಹಿಂದಿರುವ ವ್ಯಕ್ತಿಗಳು ಯುರೋಪ್‌ನಲ್ಲಿ ಇದನ್ನು ಸಂಗ್ರಹಿಸಿ ನಂತರ ಭಾರತಕ್ಕೆ ಸಾಗಿಸುತ್ತಾರೆ. ಇದರ ನೆಟ್‌ವರ್ಕ್ ಅಮೆರಿಕ ನಂಟು ಸಹ ಹೊಂದಿದೆ. ಎಲ್‌ಎಸ್‌ಡಿ ಭಾರತಕ್ಕೆ ತಲುಪಿದ ಬಳಿಕ ಬಂಧಿತ ಆರೋಪಿಗಳು ದೆಹಲಿ (ಎನ್​ಸಿಆರ್​) ಮತ್ತು ದೇಶಾದ್ಯಂತ ತಲುಪಿಸುತ್ತಿದ್ದರು ಎಂದು ಅವರು ಪ್ರಕರಣವನ್ನು ವಿವರಿಸಿದರು.

ಈ ಗ್ಯಾಂಗ್​ ಪತ್ತೆಗಾಗಿ ಎನ್‌ಸಿಬಿ ಕಳೆದ ಮೂರು ತಿಂಗಳಿನಿಂದ ತನಿಖೆ ನಡೆಸುತ್ತಿತ್ತು. ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ನಿಗಾ ಇರಿಸಿದ್ದರು. ಖರೀದಿದಾರರು ಮತ್ತು ಮಾರಾಟಗಾರರು ತೆರೆಯಲ್ಲಿ ಮಾತ್ರ ಇರುತ್ತಾರೆ. ತಮ್ಮ ಗುರುತನ್ನು ಎಂದಿಗೂ ಪರಸ್ಪರ ಬಹಿರಂಗಪಡಿಸುವುದಿಲ್ಲ. ಖರೀದಿದಾರರು ಕ್ರಿಪ್ಟೋಕರೆನ್ಸಿ ಮೂಲಕ ಹಣ ಪಾವತಿಗಳನ್ನು ಮಾಡುತ್ತಾರೆ. ಇದರ ರವಾನೆಗೆ ಕೊರಿಯರ್ ಮತ್ತು ವಿದೇಶಿ ಪೋಸ್ಟ್​ ಬಳಕೆ ಮಾಡುತ್ತಿದ್ದರು. ಅನಾಮದೇಯವಾಗಿ ಕಾರ್ಯಾಚರಣೆ ನಡೆಸಿದ್ದರಿಂದ ಅವರಿಗೆ ಸಿಕ್ಕಿಬೀಳುವ ಭಯವಿರಲಿಲ್ಲ ಎಂದು ಮಾಹಿತಿ ನೀಡಿದರು.

ಮುಂದುವರೆದು, ಖರೀದಿದಾರರು ಮತ್ತು ಮಾರಾಟಗಾರರು ನಕಲಿ ವಿಳಾಸಗಳಲ್ಲಿ ಹೊಂದಿರುತ್ತಾರೆ. ಜೊತೆಗೆ, ಇವರು ಪತ್ತೆ ಹಚ್ಚಲು ಸಾಧ್ಯವಾಗದ ಮೊಬೈಲ್ ಸಂಖ್ಯೆಗಳನ್ನು ಬಳಸುತ್ತಾರೆ. ಆದರೆ, ಎನ್‌ಸಿಬಿ ಅಧಿಕಾರಿಗಳ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಸಂಪೂರ್ಣ ಮೇಲ್ವಿಚಾರಣೆಯ ನಂತರ ನೋಯ್ಡಾದ ಖಾಸಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳನ್ನು ಎಲ್‌ಎಸ್‌ಡಿಯೊಂದಿಗೆ ಬಂಧಿಸಲಾಯಿತು. ವಿದ್ಯಾರ್ಥಿನಿ ಗೋವಾ ನಿವಾಸಿಯಾಗಿದ್ದು, ದೆಹಲಿ ಎನ್‌ಸಿಆರ್‌ನಲ್ಲಿ ಎಲ್‌ಎಸ್‌ಡಿ ದಂಧೆಯಲ್ಲಿ ತೊಡಗಿದ್ದರು. ತರುವಾಯ ಕಾಶ್ಮೀರಕ್ಕೆ ಎಲ್‌ಎಸ್‌ಡಿ ರವಾನೆ ಮಾಡಲು ಯತ್ನಿಸಿದ್ದ ಇನ್ನೊಬ್ಬ ವ್ಯಕ್ತಿಯನ್ನು ಎನ್‌ಸಿಬಿ ದೆಹಲಿಯಲ್ಲಿ ಬಂಧಿಸಿತು. ಈ ವಿದ್ಯಾರ್ಥಿನಿ ವರ್ಚುವಲ್ ಐಡಿ ಬಳಸುತ್ತಿದ್ದಳು. ಆಕೆಯ ವಿಚಾರಣೆಯಿಂದ ಜೈಪುರ ಮೂಲದ ಮಾಸ್ಟರ್‌ಮೈಂಡ್‌ನ ಬಂಧನಕ್ಕೆ ಕಾರಣವಾಗಿದೆ. ಈತನೇ ಇಡೀ ದಂಧೆಯ ಹಿಂದಿನ ಸೂತ್ರಧಾರಿ. ಕೇರಳದಲ್ಲೂ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:ರಿವಾಲ್ವರ್​ನಿಂದ ಗುಂಡು ಹಾರಿಸಿಕೊಂಡು ಮಾಜಿ IPS​ ಅಧಿಕಾರಿ ಆತ್ಮಹತ್ಯೆ

ABOUT THE AUTHOR

...view details