ನವದೆಹಲಿ :ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಬಹುತೇಕ ಎಲ್ಲ ಪ್ರತಿಪಕ್ಷಗಳ ಮುಖಂಡರ ಸಭೆ ಕರೆದಿದ್ದಾರೆ. ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳಿಂದ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಯತ್ನಗಳ ಕಾರಣದಿಂದ ಈ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ.
ಆದರೆ, ಸಿಎಂ ಮಮತಾ ಅವರ ಕಚೇರಿಯ ಮೂಲಗಳ ಪ್ರಕಾರ, ತೆಲಂಗಾಣ ರಾಷ್ಟ್ರ ಸಮಿತಿಯು ಸಭೆಗೆ ತನ್ನ ಪ್ರತಿನಿಧಿಯನ್ನು ಕಳುಹಿಸುತ್ತಿಲ್ಲ. ಇನ್ನು ರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷಗಳ ಅಭ್ಯರ್ಥಿಯ ಹೆಸರು ಅಂತಿಮವಾದ ನಂತರವೇ ತಾನು ಈ ಗುಂಪಿಗೆ ಬೆಂಬಲ ನೀಡುವ ಬಗ್ಗೆ ಪರಿಶೀಲಿಸುವುದಾಗಿ ದೆಹಲಿ ಸಿಎಂ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಹೇಳಿದೆ ಎಂದು ತಿಳಿದು ಬಂದಿದೆ.
ಅಂದರೆ ಆಮ್ ಆದ್ಮಿ ಪಾರ್ಟಿ ಸಹ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬುದು ಖಚಿತವಾದಂತಾಗಿದೆ. ಹೀಗಾಗಿ, ಇಂದಿನ ಸಭೆಯಲ್ಲಿ ಪ್ರಮುಖ ಎರಡು ಪ್ರತಿಪಕ್ಷಗಳು ಗೈರಾಗುತ್ತಿರುವುದರಿಂದ ಪ್ರತಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಪ್ರಶ್ನೆಗಳು ಮೂಡುವಂತಾಗಿದೆ. ಮಂಗಳವಾರವೇ ದೆಹಲಿಗೆ ಬಂದಿಳಿದಿರುವ ಸಿಎಂ ಮಮತಾ, ಎನ್ಸಿಪಿ ಸುಪ್ರಿಮೋ ಶರದ್ ಪವಾರ್ ಅವರನ್ನು ಭೇಟಿಯಾಗಿ ಪೂರ್ವಭಾವಿ ಚರ್ಚೆ ನಡೆಸಿದ್ದಾರೆ.
ಇಂದಿನ (ಜೂನ್ 15) ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ರಾಷ್ಟ್ರೀಯ ಲೋಕದಳದ ಜಯಂತ ಚೌಧರಿ, ಪಿಡಿಪಿಯ ಮೆಹಬೂಬಾ ಮುಫ್ತಿ ಭಾಗವಹಿಸಲಿದ್ದಾರೆ. ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ಪರವಾಗಿ ಟಿ ಆರ್ ಬಾಲು ಹಾಗೂ ಶಿವಸೇನೆಯ ಸುಭಾಷ್ ದೇಸಾಯಿ ಕೂಡ ಸಭೆಗೆ ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ.