ನವದೆಹಲಿ: ಬಡವರು, ಕಾರ್ಮಿಕರು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ನೆರವು ನೀಡಬೇಕೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಕೊರೊನಾ -19 ರ ಭೀಕರತೆಯನ್ನು ನೋಡಿದಾಗ, ಸರ್ಕಾರವು ಲಾಕ್‌ಡೌನ್ ನಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿರುವುದು ಸ್ಪಷ್ಟವಾಗಿದೆ. ಆದರೆ, ವಲಸೆ ಕಾರ್ಮಿಕರನ್ನು ಮತ್ತೊಮ್ಮೆ ಕೈ ಬಿಟ್ಟಿದೆ. ಇದೇನಾ ನಿಮ್ಮ ತಂತ್ರ?. ಜಾರಿಗೆ ತರಲಾಗುವ ನೀತಿಗಳು ಎಲ್ಲರನ್ನೂ ನೋಡಿಕೊಳ್ಳುವಂತಹದ್ದಾಗಿರಬೇಕು ಎಂದ ಅವರು, ಬಡವರು, ಕಾರ್ಮಿಕರು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ವಿತ್ತೀಯ ಸಹಾಯದ ಅವಶ್ಯಕತೆಯಿದೆ. ದಯವಿಟ್ಟು ಆ ಕೆಲಸ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪುಷ್ಟಿ ನೀಡುವಂತೆ ಆನಂದ್ ವಿಹಾರ್ ಬಸ್ ಟರ್ಮಿನಲ್ನಲ್ಲಿ ನೂರಾರು ವಲಸೆ ಕಾರ್ಮಿಕರು ಇರುವ ಚಿತ್ರ ಶೇರ್ ಮಾಡಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು. ವಲಸೆ ಕಾರ್ಮಿಕರು ಮತ್ತೊಮ್ಮೆ ವಲಸೆ ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಹಾಕುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಗಾಂಧಿ ಟ್ವೀಟ್ ಮಾಡಿದ್ದರು.
ಇನ್ನು ಕಳೆದ ವರ್ಷ ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೇರಿದಾಗ ವಲಸಿಗರು ತಮ್ಮ ಊರುಗಳಿಗೆ ಸೈಕಲ್‌ನಲ್ಲಿ ಅಥವಾ ಕಾಲ್ನಡಿಗೆಯಲ್ಲಿ ತೆರಳಿದ್ದರು. ಏಕೆಂದರೆ ವಾಹನಗಳು ಮತ್ತು ರೈಲುಗಳು ಆ ವೇಳೆ ದೀರ್ಘಕಾಲದವರೆಗೆ ಲಭ್ಯವಿರಲಿಲ್ಲ. ಆದರೆ, ಈ ಸಮಯದಲ್ಲಿ, ಅವರು ಅದನ್ನು ಅನುಭವಿಸಲು ಬಯಸುವುದಿಲ್ಲ. ಈ ಕಾರಣಕ್ಕೆ ತಮ್ಮ ಸ್ಥಳೀಯ ಸ್ಥಳಗಳಿಗೆ ಹಿಂತಿರುಗಲು ಪ್ರಾರಂಭಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ 2,59,170 ಕೊರೊನಾ ಸೋಂಕು ವರದಿಯಾಗಿವೆ. ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲಿ ಪ್ರಸ್ತುತ 20,31,977 ಸಕ್ರಿಯ ಪ್ರಕರಣಗಳಿವೆ.