ನವದೆಹಲಿ:ರಾಷ್ಟ್ರ ರಾಜಧಾನಿಯ ವಿಜ್ಞಾನ ಭವನದಲ್ಲಿ ನಡೆದ ಸಿಬಿಐ ವಜ್ರ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಯಾವುದೇ ಹಿಂಜರಿಕೆ ಇಲ್ಲದೇ ಮುಂದುವರೆಸುವಂತೆ ಸಿಬಿಐಗೆ ಕರೆ ನೀಡಿದ್ದರು. ಅಲ್ಲದೇ ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡುವಲ್ಲಿ ಸಿಬಿಐನ ಪಾತ್ರ ದೊಡ್ಡದು ಎಂದು ಪ್ರತಿಪಾದಿಸಿದರು. ಇದಕ್ಕೆ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ತಿರುಗೇಟು ನೀಡಿದ್ದಾರೆ. ಯುಪಿಎ ಆಡಳಿತದಲ್ಲಿ ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಪರಾಧಿಗಳ ಸಂಖ್ಯೆ ಹೆಚ್ಚು ಎಂದು ಹೇಳಿದ್ದಾರೆ.
"ಭ್ರಷ್ಟರನ್ನು ಯಾರು ರಕ್ಷಿಸುತ್ತಿದ್ದಾರೆ?":ಈ ಬಗ್ಗೆ ಟ್ವೀಟ್ ಮಾಡಿದ ಕಪಿಲ್ ಸಿಬಲ್, ಮಾರ್ಚ್ 2016ರಂದು ಜಿತೇಂದ್ರ ಸಿಂಗ್ ಅವರು ಸಂಸತ್ತಿಗೆ ನೀಡಿದ ವರದಿಯನ್ನು ಉಲ್ಲೇಖಿಸಿದ್ದಾರೆ. 2013ರಲ್ಲಿ 1,136 ಜನರು, 2014ರಲ್ಲಿ 993 ಮಂದಿ, 2015ರಲ್ಲಿ 878 ಮಂದಿ, 2016ರಲ್ಲಿ 71 ಮಂದಿ ಭ್ರಷ್ಟಾಚಾರಕ್ಕಾಗಿ ಶಿಕ್ಷೆಗೊಳಗಾದವರು. ಪ್ರಧಾನಿ ಸುಳ್ಳು ಹೇಳಬಹುದು. ಆದರೆ ಸತ್ಯಗಳು ಸುಳ್ಳಾಗುವುದಿಲ್ಲ. ಭ್ರಷ್ಟರನ್ನು ರಕ್ಷಿಸುವವರು ಯಾರು? ಎಂದು ಪ್ರಶ್ನಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಸಿಬಲ್ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಸದಸ್ಯರಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
ಪ್ರತಿಪಕ್ಷಗಳ ವಿರುದ್ಧ ಪಿಎಂ ವಾಗ್ದಾಳಿ: ಸೋಮವಾರ ಸಿಬಿಐ ವಜ್ರ ಮಹೋತ್ಸವ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ದಶಕಗಳಿಂದ ಭ್ರಷ್ಟಾಚಾರದಿಂದ ಲಾಭ ಪಡೆದವರು ತನಿಖಾ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಹೊಸ ವ್ಯವಸ್ಥೆಯನ್ನು ರಚಿಸಿದ್ದಾರೆ. ಆದರೆ ಅದಕ್ಕೆ ಏಜೆನ್ಸಿಗಳು ಧೃತಿಗೆಡದೇ ತಮ್ಮ ಕೆಲಸಗಳತ್ತ ಗಮನ ಹರಿಸಬೇಕು ಎಂದು ಪ್ರಧಾನಿ ಧೈರ್ಯ ತುಂಬಿದ್ದರು.