ಹೈದರಾಬಾದ್ : ಕೊರೊನಾದ ಎರಡನೇ ಅಲೆ ವಕ್ಕರಿಸಿರುವ ಹಿನ್ನೆಲೆ ಪ್ರತಿದಿನ ಲಕ್ಷಾಂತರ ಸೋಂಕು ಪ್ರಕರಣ ವರದಿಯಾಗುತ್ತಿವೆ. ಆದರೆ, ಕಳೆದ ವರ್ಷ, ಕೊರೊನಾ ವೈರಸ್‌ನ ಬದಲಾವಣೆಗಳು ಮತ್ತು ಅದರ ರೋಗಲಕ್ಷಣಗಳಿಂದ ಅನೇಕ ಜನರು ಗೊಂದಲಕ್ಕೊಳಗಾಗಿದ್ದಾರೆ.
ಈ ಗೊಂದಲದಿಂದಾಗಿ ಅನೇಕ ಜನರಿಗೆ ರೋಗಲಕ್ಷಣಗಳ ಬಗ್ಗೆ ತಿಳಿದಿಲ್ಲ, ಆದ್ದರಿಂದ ಅನೇಕ ಜನರು, ರೋಗಲಕ್ಷಣಗಳನ್ನು ಹೊಂದಿದ್ದರೂ ಸಹ ಏನು ಮಾಡಬೇಕೆಂದು ಅರ್ಥವಾಗುವುದಿಲ್ಲ.
ಈ ಕಾರಣದಿಂದಾಗಿ ಪ್ರತಿ 24 ಗಂಟೆಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಸೋಂಕು ಪ್ರಕರಣ ದಾಖಲಾಗುತ್ತಿವೆ ಮತ್ತು ಏಪ್ರಿಲ್‌ನಲ್ಲಿ ಹಠಾತ್ ಸಾವಿನ ಸಂಖ್ಯೆಯೂ ಹೆಚ್ಚಾಗಿದೆ.
ಕೊರೊನಾ ವೈರಸ್ ರೋಗಲಕ್ಷಣಗಳಿಂದ ಹಿಡಿದು ಚಿಕಿತ್ಸೆಯವರೆಗೆ ಜನರಲ್ಲಿ ಸಾಕಷ್ಟು ಪ್ರಶ್ನೆಗಳು ಎದುರಾಗಿವೆ. ಈ ಹಿನ್ನೆಲೆ ಈಟಿವಿ ಭಾರತ ವರದಿಗಾರ ಮೊಹಮ್ಮದ್ ತೌಸಿಫ್ ಅಹ್ಮದ್ ಅವರು ಭಾರತೀಯ ವೈದ್ಯಕೀಯ ಸಂಶೋಧನಾ (ಐಸಿಎಂಆರ್) ಮಾಜಿ ಮಹಾನಿರ್ದೇಶಕ ಡಾ. ನಿರ್ಮಲ್ ಕುಮಾರ್ ಗಂಗೂಲಿ ಅವರೊಂದಿಗೆ ವಿಶೇಷ ಸಂವಾದ ನಡೆಸಿದ್ದಾರೆ.
ಪ್ರಶ್ನೆ: ಕಳೆದ ವರ್ಷದ ಆರಂಭದಲ್ಲಿ, ಜನರು ಕೊರೊನಾ ವೈರಸ್ ಹೆಸರನ್ನು ಮಾತ್ರ ಕೇಳಿದ್ದರು. ಆದರೆ, ಈ ಬಾರಿ ಕೊರೊನಾ ರೂಪಾಂತರಿ ವೈರಸ್ ಬಗ್ಗೆ ಮಾತನಾಡಲಾಗುತ್ತಿದೆ. ಸಾಮಾನ್ಯ ಜನತೆ ಇದನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?
ಡಾ. ಗಂಗೂಲಿ :ಯಾವುದೇ ವೈರಸ್ ದೇಹಕ್ಕೆ ಪ್ರವೇಶಿಸಿದಾಗ, ಅದರಲ್ಲಿ ಬದಲಾವಣೆ ಕಂಡು ಬರುತ್ತದೆ, ಇದನ್ನು ರೂಪಾಂತರ ಎಂದು ಕರೆಯಲಾಗುತ್ತದೆ. ರೂಪಾಂತರದ ಈ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತದೆ, ಅನೇಕ ಬಾರಿ ವೈರಸ್ 22 ರಿಂದ 23 ರೂಪಾಂತರಗಳನ್ನು ಹೊಂದಿರುತ್ತದೆ.
ಕೊರೊನಾ ವೈರಸ್‌ನ ಪ್ರಸ್ತುತ ರೂಪಾಂತರವು ಈಗಿನ ಅಥವಾ ಮುಂಚಿನ ರೂಪಾಂತರಿಗಳಿಗಿಂತ ಹೆಚ್ಚು ವೇಗವಾಗಿ ಹರಡುತ್ತಿದೆ ಮತ್ತು ಯುವಜನರಿಗೂ ಸೋಂಕು ತಗುಲುತ್ತಿದೆ. ಈ ರೂಪಾಂತರಿತ ಸೋಂಕಿಗೆ ಒಳಗಾದ ಜನರಿಗೆ ಹೆಚ್ಚು ಜ್ವರ ಮತ್ತು ಶರೀರದಲ್ಲಿ ನೋವು ಇರುತ್ತದೆ.
ಪ್ರಶ್ನೆ: ಹೆಚ್ಚುತ್ತಿರುವ ಸೋಂಕಿನ ಪ್ರಕರಣಗಳಿಂದಾಗಿ, ಅನೇಕ ಜನರು ಆಸ್ಪತ್ರೆಗಳ ಬದಲು ಮನೆಯಲ್ಲೇ ಹೋಮ್ ಐಸೋಲೇಶನ್ ಆಗುತ್ತಿದ್ದಾರೆ. ಒಬ್ಬ ಸೋಂಕಿತ ಆಸ್ಪತ್ರೆ ಅಥವಾ ಮನೆಯಲ್ಲೇ ಪ್ರತ್ಯೇಕವಾಗಿರಬಹುದೇ ಎಂಬುದನ್ನು ನಿರ್ಧರಿಸಬೇಕಾದ ಲಕ್ಷಣಗಳು ಯಾವುವು?
ಡಾ. ಗಂಗೂಲಿ: ಈ ರೂಪಾಂತರಿ ಸೋಂಕಿಗೆ ಒಳಗಾದ ವ್ಯಕ್ತಿಗೆ ಮೊದಲು ಜ್ವರ ಬರುತ್ತದೆ, ನಂತರ ಗಂಟಲು ನೋವು ಮತ್ತು ಕೆಮ್ಮು ಇರುತ್ತದೆ. ದೇಹದಲ್ಲಿ ನೋವು, ತಲೆನೋವು ಸಹ ಸಾಮಾನ್ಯ ಲಕ್ಷಣಗಳಾಗಿವೆ. ಆದರೆ, ಉಸಿರಾಟದಲ್ಲಿ ತೊಂದರೆ ಇದ್ದಾಗ ಮಾತ್ರ ಸಮಸ್ಯೆ ಗಂಭೀರವಾಗುತ್ತದೆ. ಈ ಸಂದರ್ಭದಲ್ಲಿ ಆರ್ಸಿಪಿಸಿಆರ್ ಅಥವಾ ಆಂಟಿಜೆನ್ ಪರೀಕ್ಷೆಯನ್ನು ಮಾಡಬೇಕು.
ರೋಗಲಕ್ಷಣಗಳಿದ್ದರೂ ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದರೆ ಪರೀಕ್ಷೆಯನ್ನು ಮತ್ತೆ ಮಾಡಿ ಕೊರೊನಾ ಸೋಂಕಿನ ಬಗ್ಗೆ ದೃಢಪಡಿಸಿಕೊಂಡ ನಂತರ ಸಿಆರ್ಪಿ ಮತ್ತು ಪ್ಲೇಟ್‌ಲೆಟ್ ಕೌಂಟ್ನಂತಹ ಪರೀಕ್ಷೆಗಳನ್ನು ಮಾಡಬೇಕು. ಇವು ಕೊರೊನಾ ಸೋಂಕಿನ ಮಟ್ಟವನ್ನು ಸೂಚಿಸುತ್ತವೆ. ಆಮ್ಲಜನಕದ ಮಟ್ಟ 90 ಕ್ಕಿಂತ ಕಡಿಮೆಯಿದ್ದರೆ, ಆಸ್ಪತ್ರೆಗೆ ಸೇರಿಸುವುದು ಅವಶ್ಯಕ.
ಪ್ರಶ್ನೆ:ಕಳೆದ ವರ್ಷ, ಕೋವಿಡ್ -19 ಲಕ್ಷಣಗಳು ಶೀತ, ಜ್ವರ, ಗಂಟಲು ನೋವು, ನೆಗಡಿ ಎನ್ನಲಾಗಿತ್ತು. ಆದರೆ, ಅನೇಕ ತಜ್ಞರು ಈಗ ಕಣ್ಣುಗಳ ಕೆಂಪಾಗುವುದು, ವಾಕರಿಕೆ ಮತ್ತು ಹಸಿವಿನ ಕೊರತೆಯ ಲಕ್ಷಣಗಳನ್ನು ತೋರಿಸುತ್ತಿದ್ದಾರಲ್ಲ.
ಡಾ. ಗಂಗೂಲಿ : ಇಷ್ಟೇ ಅಲ್ಲದೇ ನಾಲಗೆ ರುಚಿ ಕಳೆದುಕೊಳ್ಳುವುದು ಮತ್ತು ಮೂಗಿಗೆ ವಾಸನೆ ಬರದೇ ಇರುವುದು, ಹೊಟ್ಟೆಯಲ್ಲಿ ಸಮಸ್ಯೆ, ಉಸಿರಾಟ ಸಮಸ್ಯೆ ಕೂಡ ಕೊರೊನಾ ಸೋಂಕಿನ ಲಕ್ಷಣಗಳಾಗಿರಬಹುದು.
ಪ್ರಶ್ನೆ: ಜ್ವರ, ಶೀತ ಕೂಡ ಸಾಮಾನ್ಯ ವೈರಲ್‌ನ ಲಕ್ಷಣಗಳಾಗಿವೆ. ಆದರೆ, ಕೊರೊನಾ ಯುಗದಲ್ಲಿ ಈ ಲಕ್ಷಣಗಳು ಭಯ ಹುಟ್ಟಿಸುತ್ತವೆ. ಈ ದಿನಗಳಲ್ಲಿ, ಅನೇಕ ಜನರು ವೈದ್ಯಕೀಯ ಸಲಹೆಯಿಲ್ಲದೆ ಜ್ವರ ಅಥವಾ ಶೀತದ ಮಾತ್ರೆ ಔಷಧಿ ತೆಗೆದುಕೊಳ್ಳುತ್ತಿದ್ದಾರೆ. ಅಂತವರಿಗೆ ನಿಮ್ಮ ಸಲಹೆ ಏನು?
ಡಾ. ಗಂಗೂಲಿ:ಇದನ್ನು ಮಾಡಬೇಡಿ. ಏಕೆಂದರೆ, ಈ ಲಕ್ಷಣಗಳು ಹಾಗೂ ಸಾಮಾನ್ಯ ಜ್ವರ ಕೊರೊನಾದಿಂದಲೂ ಉಂಟಾಗಬಹುದು. ಆದ್ದರಿಂದ, ರೋಗಲಕ್ಷಣಗಳು ಕಂಡು ಬಂದರೆ, ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಮಾಡಿಸಿ. ಇದರಿಂದ ನೀವು ವೈದ್ಯರ ಸಲಹೆಯ ಮೇರೆಗೆ ಸರಿಯಾದ ಔಷಧಿಯನ್ನು ತೆಗೆದುಕೊಳ್ಳಬಹುದು.
ಪ್ರಶ್ನೆ: ಸ್ಟೀಮಿಂಗ್ ತೆಗೆದುಕೊಳ್ಳುವುದು, ಬಿಸಿ ನೀರು ಅಥವಾ ಕಷಾಯವನ್ನು ಕುಡಿಯುವುದು ಸೇರಿ ಈ ದಿನಗಳಲ್ಲಿ, ಇಂತಹ ಮನೆಮದ್ದುಗಳು ಬಹಳ ಜನಪ್ರಿಯವಾಗಿವೆ. ಈ ಮನೆಮದ್ದುಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅವರಿಗೆ ವೈದ್ಯಕೀಯ ಸಲಹೆ ಅಗತ್ಯವಿದೆಯೇ?
ಡಾ. ಗಂಗೂಲಿ :ಈ ಮನೆಮದ್ದುಗಳಿಗೆ ಯಾವುದೇ ವೈದ್ಯಕೀಯ ಸಲಹೆ ಅಗತ್ಯವಿಲ್ಲ. ನೀವು ದಿನಕ್ಕೆ 3 ಬಾರಿ ಸ್ಟೀಮಿಂಗ್ ತೆಗೆದುಕೊಳ್ಳಬಹುದು. ಆದರೆ, ಅದರ ಉಷ್ಣತೆ ಅಧಿಕವಾಗಿರಬಾರದು. ಯಾಕೆಂದರೆ, ಅದು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ, ಕಷಾಯವನ್ನು ಕುಡಿಯುವುದು ಸಹ ಪ್ರಯೋಜನಕಾರಿಯಾಗಿದೆ, ಚ್ಯಾವಾನ್‌ಪ್ರಶ್ ತಿನ್ನುವುದು ಮತ್ತು ಹಾಲಿನೊಂದಿಗೆ ಅರಿಶಿನ ಬೆರೆಸಿ ಕುಡಿಯುವುದು ಮುಂತಾದ ಮನೆಮದ್ದುಗಳು ಸಹ ವಿಜ್ಞಾನವನ್ನು ಆಧರಿಸಿವೆ.