ಇಂದೋರ್(ಮಧ್ಯಪ್ರದೇಶ) :ಇಂದೋರ್‌ನಲ್ಲಿ ನಡೆದ ಹೊಸ ವರ್ಷದ ಕಾರ್ಯಕ್ರಮವೊಂದರಲ್ಲಿ ಹಿಂದೂ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಿದ ಆರೋಪದಡಿ ಬಂಧಿಸಲ್ಪಟ್ಟ ಗುಜರಾತ್‌ನ ಸ್ಟ್ಯಾಂಡ್-ಅಪ್ ಹಾಸ್ಯನಟ ಮುನಾವರ್ ಫಾರೂಕಿ ಅವರನ್ನು ಇಂದೋರ್ ಜಿಲ್ಲಾ ನ್ಯಾಯಾಲಯ ಶನಿವಾರ ಜನವರಿ 13ರವರೆಗೆ ನ್ಯಾಯಾಂಗ ಕಸ್ಟಡಿಗೆ ಕಳುಹಿಸಿದೆ.
ಇಂದೋರ್‌ನಲ್ಲಿ ನಡೆದ ಹೊಸ ವರ್ಷದ ಕಾರ್ಯಕ್ರಮದಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಿದ ಆರೋಪದ ಮೇರೆಗೆ ಮುನಾವರ್ ಫಾರೂಕಿ ಮತ್ತು ಇತರೆ ನಾಲ್ವರು ಕಾರ್ಯಕ್ರಮ ಆಯೋಜಕರನ್ನು ಶುಕ್ರವಾರದಂದು ಬಂಧಿಸಲಾಗಿದೆ. ಹಿಂದ್ ರಕ್ಷಕ್ ಸಂಘಟಣೆ ಅಧ್ಯಕ್ಷ ಮತ್ತು ಬಿಜೆಪಿ ಶಾಸಕ ಮಾಲಿನಿ ಗೌರ್ ಅವರ ಪುತ್ರ ಏಕ್ಲವ್ಯ ಗೌರ್ ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಿಸಲಾಗಿದೆ. ವಕೀಲ ದಿನೇಶ್ ಪಾಂಡೆ ಅವರು ನ್ಯಾಯಾಲಯದಲ್ಲಿ ಏಕ್ಲವ್ಯ ಗೌರ್ ದೂರಿನ ಪರ ನ್ಯಾಯಾಲಯದಲ್ಲಿ ವಾದಿಸಿದ್ದರು.
ಇಂದೋರ್ ಮೂಲದ ಪ್ರಖರ್ ವ್ಯಾಸ್, ಪ್ರಿಯಮ್ ವ್ಯಾಸ್, ನಳಿನ್ ಯಾದವ್ ಮತ್ತು ಈವೆಂಟ್ ಸಂಯೋಜಕ ಎಡ್ವಿನ್ ಆಂಥೋನಿ ಬಂಧಿತರಾಗಿದ್ದಾರೆ. ಇನ್ನೂ ನ್ಯಾಯಾಲಯದ ವಿಚಾರಣೆಯ ನಂತರ ಅವರನ್ನು ಜೈಲಿಗೆ ಕರೆದೊಯ್ಯುವ ವೇಳೆ ಆರೋಪಿಗಳ ಮೇಲೆ ಹಲ್ಲೆ ನಡೆಸಲಾಗಿದೆ.
ಈ ಸುದ್ದಿಯನ್ನೂ ಓದಿ:ವಿಡಿಯೋ ನೋಡಿ : ಜಂಗಲ್ ಸಫಾರಿ ಎಂಜಾಯ್ ಮಾಡ್ತಿದ್ದಾರೆ ಆಲಿಯಾ
ಏಕ್ಲವ್ಯ ಗೌರ್ ಮಾತನಾಡಿ, ಮುನಾವರ್ ಫಾರೂಕಿ ಈ ರೀತಿಯ ಅನೇಕ ಘಟನೆಯಲ್ಲಿ ಭಾಗಿಯಾಗಿದ್ದಾರೆ. ನಮಗೆ ಈ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ನಾವು ಆ ಸ್ಥಳಕ್ಕೆ ತೆರಳಿದ್ದೇವೆ. ಅವರು ತಮ್ಮ ಪ್ರದರ್ಶನದಲ್ಲಿ ಹಿಂದೂ ದೇವರುಗಳನ್ನು ಅವಮಾನಿಸಿದ್ದಾರೆ. ಈ ಕುರಿತು ನಾವು ವಿಡಿಯೋ ಮಾಡಿದ್ದೇವೆ. ಆ ಕೂಡಲೇ ಕಾರ್ಯಕ್ರಮವನ್ನು ನಿಲ್ಲಿಸಿ, ಜನರನ್ನು ಅಲ್ಲಿಂದ ತೆರಳುವಂತೆ ತಿಳಿಸಿದೆವು.
ಅಷ್ಟೇ ಅಲ್ಲ, ಅವರು ಕಾರ್ಯಕ್ರಮಕ್ಕೆ ಸೂಕ್ತ ಅನುಮತಿ ಪಡೆದಿಲ್ಲ ಮತ್ತು ಸಾಮಾಜಿಕ ಅಂತರ ನಿಯಮವನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದರು. ಬಳಿಕ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದು, ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು.
ವಕೀಲ ದಿನೇಶ್ ಪಾಂಡೆ ಪ್ರತಿಕ್ರಿಯಿಸಿ, ಆರೋಪಿಗಳು ಅನುಮತಿಯಿಲ್ಲದೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಹಿಂದೂ ದೇವರುಗಳನ್ನು ತಮ್ಮ ಪ್ರದರ್ಶನದಲ್ಲಿ ಅವಮಾನಿಸಿದ್ದಾರೆ. ಈ ಹಿನ್ನೆಲೆ ಅವರನ್ನು ಬಂಧಿಸಿ, ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರನ್ನು ಜನವರಿ 13ರವರೆಗೆ ನ್ಯಾಯಾಂಗ ಕಸ್ಟಡಿಗೆ ಕಳುಹಿಸಿದೆ. ಐಪಿಸಿ ಸೆಕ್ಷನ್ 188, 269, 34 ಮತ್ತು 295ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.