ನವದೆಹಲಿ:ತಮಿಳುನಾಡಿನ ರಾಮಸೇತುವಿಗೆ ರಾಷ್ಟ್ರೀಯ ಪಾರಂಪರಿಕ ಸ್ಥಾನಮಾನ ನೀಡುವ ಕುರಿತು ಸಂಸ್ಕೃತಿ ಸಚಿವಾಲಯವು ಪರಿಶೀಲನೆ ನಡೆಸುತ್ತಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಗುರುವಾರ ಮಾಹಿತಿ ನೀಡಿದೆ. ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸಲು ನಿರ್ದೇಶನ ನೀಡುವಂತೆ ಕೋರಿ ರಾಜ್ಯಸಭೆಯ ಮಾಜಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ.
ಮನ್ನಾರ್ ಮತ್ತು ಪಲ್ಕ್ ಸ್ಟ್ರೈಟ್ಅನ್ನು ಸಂಪರ್ಕಿಸುವ 83 ಕಿಮೀ ಉದ್ದದ ಸೇತು ಸಮುದ್ರಂ ಶಿಪ್ ಕಾನಲ್ ಯೋಜನೆಗೆ ಸಂಬಂಧಿಸಿದಂತೆ 2007ರಲ್ಲಿ ಸುಬ್ರಮಣಿಯನ್ ಸ್ವಾಮಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಯೋಜನೆಗಾಗಿ ವ್ಯಾಪಕವಾದ ಹೂಳೆತ್ತುವಿಕೆಯಿಂದಾಗಿ ರಾಮಸೇತುವಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಈ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ನಡೆಸುತ್ತಿದೆ.
ಇಂದು ಸವೋಚ್ಛ ನ್ಯಾಯಾಲಯದಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ರಾಮಸೇತುವಿಗೆ ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಎಂದು ಘೋಷಿಸುವ ಬಗ್ಗೆ ಸಂಸ್ಕೃತಿ ಸಚಿವಾಲಯವು ಪರಿಗಣಿಸುತ್ತಿದೆ ಎಂದು ಹೇಳಿದರು. ಅರ್ಜಿದಾರ ಸುಬ್ರಮಣಿಯನ್ ಸ್ವಾಮಿ ಅಲ್ಲಿಯೇ ಪ್ರಾತಿನಿಧ್ಯವನ್ನು ನೀಡಬಹುದು ಎಂದು ಸುಪ್ರೀಂಗೆ ತಿಳಿಸಿದರು.
ಇದನ್ನೂ ಓದಿ:'ರಾಮಸೇತು' ಸಂಶೋಧನೆಗೆ ಕೇಂದ್ರ ಸಂಸ್ಕೃತಿ ಸಚಿವಾಲಯ ಅನುಮೋದನೆ
ಈ ವೇಳೆ 2019ರಲ್ಲಿ ಸಂಸ್ಕೃತಿ ಸಚಿವ ಪ್ರಹ್ಲಾದ್ ಪಟೇಲ್ ಅವರು ಈ ವಿಷಯದ ಬಗ್ಗೆ ಸಭೆ ಕರೆದಿದ್ದರು ಎಂದು ಸ್ವಾಮಿ ಹೇಳಿದರು. ರಾಮಸೇತು ಅಸ್ತಿತ್ವವನ್ನು ಕೇಂದ್ರವು ಒಪ್ಪಿಕೊಂಡಿರುವುದರಿಂದ ಮೊದಲ ಸುತ್ತಿನಲ್ಲಿ ನಾನು ಈಗಾಗಲೇ ಗೆದ್ದಿದ್ದೇನೆ ಎಂದೂ ತಿಳಿಸಿದರು. ಅಲ್ಲದೇ, ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವಾಗಿ ಘೋಷಿಸುವ ತಮ್ಮ ಬೇಡಿಕೆಯನ್ನು ಪರಿಗಣಿಸುವ ಕುರಿತ ಸಹ 2017ರಲ್ಲಿ ಸಭೆ ಕರೆಯಲಾಗಿತ್ತು. ಆದರೆ, ಇದರ ನಂತರ ಯಾವುದೇ ಪ್ರಗತಿಯಾಗಿಲ್ಲ ಎಂದೂ ದೂರಿದರು.
ಈ ಸಂದರ್ಭದಲ್ಲಿ ಸುಬ್ರಮಣಿಯನ್ ಸ್ವಾಮಿ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಬಹುದು ಎಂದು ಸಾಲಿಸಿಟರ್ ಜನರಲ್ ಮೆಹ್ತಾ ತಿಳಿಸಿದರು. ಆಗ ಇದಕ್ಕೆ ನಾನು ಯಾರನ್ನೂ ಭೇಟಿ ಮಾಡುವುದಿಲ್ಲ. ನಾವು ಒಂದೇ ಪಕ್ಷದಲ್ಲಿದ್ದೇವೆ. ಅವರು ಪ್ರಣಾಳಿಕೆಯನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಸ್ವಾಮಿ ಪ್ರತಿಕ್ರಿಯಿಸಿದರು. ಇದೇ ವೇಳೆ, ನ್ಯಾಯಪೀಠವು ಸಹ ಸ್ವಾಮಿ ಅವರಿಗೆ ಈ ಬಗ್ಗೆ ಚರ್ಚಿಸಲು ಸಚಿವಾಲಯವನ್ನು ಸಂಪರ್ಕಿಸಲು ಸ್ವಾತಂತ್ರ್ಯವನ್ನು ನೀಡಿತು.
ಇನ್ನು, ರಾಮಸೇತು ಕುರಿತಾಗಿ ಸ್ವಾಮಿ ನ್ಯಾಯಾಲಯದ ಮುಂದೆ ಹಲವಾರು ಬಾರಿ ತಮ್ಮ ಮನವಿಯನ್ನು ಸಲ್ಲಿಸಿದ್ದರು. ಜೊತೆಗೆ ಈ ವಿಷಯವನ್ನು ಅನೇಕ ಬಾರಿಯ ನ್ಯಾಯಾಲಯ ಪಟ್ಟಿ ಸಹ ಮಾಡಿತ್ತು. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಲು ಮುಂದೆ ಬಂದಿರಲಿಲ್ಲ. ಹೀಗಾಗಿ ಎಲ್ಲ ವಿಚಾರಣೆಯ ಸಂದರ್ಭಗಳಲ್ಲಿ ಕೇಂದ್ರದ ವಿಳಂಬ ನೀತಿ ಅನುಸರಿಸುತ್ತಿದೆ ಬಗ್ಗೆ ಸ್ವಾಮಿ ದೂರಿದ್ದರು.
ಇದನ್ನೂ ಓದಿ:ಆರ್ಥಿಕ ಏಳಿಗೆಗೆ ಸೇತುಸಮುದ್ರಂ ಯೋಜನೆ ಪುನಶ್ಚೇತನ ಅಗತ್ಯ: ಸಿಎಂ ಸ್ಟಾಲಿನ್