ನವದೆಹಲಿ:"ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯವಾದ ಮಂದಿರ ನಿರ್ಮಾಣವಾಗಬೇಕು ಎಂಬುದು ವಿಧಿ ಲಿಖಿತ. ಮಂದಿರ ನಿರ್ಮಾಣಕ್ಕಾಗಿ ದೇವರು, ತನ್ನ ಭಕ್ತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿಕೊಂಡಿದ್ದಾನೆ" ಎಂದು ಬಿಜೆಪಿಯ ಭೀಷ್ಮ, ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಹೇಳಿದ್ದಾರೆ.
76 ವರ್ಷ ಇತಿಹಾಸದ 'ರಾಷ್ಟ್ರ ಧರ್ಮ' ನಿಯತಕಾಲಿಕೆಯಲ್ಲಿ ಬರೆದಿರುವ 'ಏಕ್ ದಿವ್ಯ ಸ್ವಪ್ನಕಿ ಪೂರ್ಣಿ' (ಒಂದು ದಿವ್ಯ ಸ್ವಪ್ನದ ಪೂರ್ತಿ) ವಿಶೇಷ ಲೇಖನದಲ್ಲಿ ಅವರು ರಾಮಮಂದಿರ ಹೋರಾಟ, ತಮ್ಮ ಪಾತ್ರದ ಬಗ್ಗೆ ಅವರು ಮೆಲುಕು ಹಾಕಿದ್ದಾರೆ. "ಅಯೋಧ್ಯೆ ಚಳವಳಿಯು ದೇಶದ ನಿರ್ಣಾಯಕ ಮತ್ತು ಪರಿವರ್ತನೆಯ ಘಟ್ಟವಾಗಿದೆ ಎಂಬುದು ನನ್ನ ನಂಬಿಕೆ. ಮಂದಿರ ನಿರ್ಮಾಣದ ಮೂಲಕ ದಿವ್ಯ ಸ್ವಪ್ನವೊಂದು ಪೂರ್ತಿಯಾದ ತೃಪ್ತಿ ಇದೆ" ಎಂದು ಅವರು ಉಲ್ಲೇಖಿಸಿದ್ದಾರೆ.
ನಾನು ಸಾರಥಿಯಷ್ಟೇ:"ರಾಮರಥ ಯಾತ್ರೆ 33 ವರ್ಷಗಳನ್ನು ಪೂರೈಸಿದೆ. 1990 ರ ಸೆಪ್ಟೆಂಬರ್ 25 ರಂದು ರಥಯಾತ್ರೆಯನ್ನು ಪ್ರಾರಂಭಿಸಿದ್ದೆವು. ಯಾತ್ರೆ ಪ್ರಾರಂಭಿಸುವ ಮುನ್ನ ರಾಮನ ಮೇಲಿನ ನಂಬಿಕೆಯು ಚಳವಳಿಯ ಸ್ವರೂಪ ಪಡೆಯುತ್ತದೆ ಎಂದು ಭಾವಿಸಿರಲಿಲ್ಲ. ಮಂದಿರ ನಿರ್ಮಾಣ ಹೋರಾಟದಲ್ಲಿ ನಾನು ಸಾರಥಿಯಾಗಿದ್ದೆ" ಎಂದು ಅಡ್ವಾಣಿ ಅವರು ತಮ್ಮ ಲೇಖನದಲ್ಲಿ ಹೇಳಿರುವುದಾಗಿ ಮೂಲವೊಂದು ತಿಳಿಸಿದೆ.
"ರಥಯಾತ್ರೆಯ ವೇಳೆ ನನ್ನ ಮೇಲೆ ಅನೇಕ ವಿಷಯಗಳು ಪ್ರಭಾವ ಬೀರಿದವು. ದೂರದ ಹಳ್ಳಿಗಳಿಂದ ಬಂದ ಅಪರಿಚಿತರು ರಥವನ್ನು ಕಂಡು ಭಾವೋದ್ವೇಗದಿಂದ ನನ್ನ ಬಳಿ ಬಂದು ನಮಸ್ಕರಿ, 'ಜೈಶ್ರೀರಾಮ್' ನಾಮವನ್ನು ಜಪಿಸುತ್ತಿದ್ದರು. ದೇಶದಲ್ಲಿ ಅಚ್ಚಳಿಯದೆ ಉಳಿಯುವ ಹೋರಾಟ ಇದಾಗಲಿದೆ ಎಂದು ನಾನು ಅಂದೇ ಭಾವಿಸಿದ್ದೆ" ಎಂದು ಹೇಳಿದ್ದಾರೆ.
"ರಾಮಮಂದಿರ ಆಂದೋಲನದ ಮುಂಚೂಣಿ ನಾಯಕರಲ್ಲಿ ಒಬ್ಬರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನಪಿಸಿಕೊಂಡಿರುವ ಅಡ್ವಾಣಿ, ಅಯೋಧ್ಯೆಯ ಭವ್ಯ ರಾಮ ಮಂದಿರ ಉದ್ಘಾಟನೆಯಲ್ಲಿ ವಾಜಪೇಯಿ ಅವರ ಗೈರು ನನ್ನನ್ನು ಕಾಡುತ್ತದೆ. ಇಂದು ಅವರು ಇರಬೇಕಿತ್ತು" ಎಂದು ಬರೆದುಕೊಂಡಿದ್ದಾರೆ.
ದೇವರ ಆಯ್ಕೆ:"ಭಗವಾನ್ ಶ್ರೀರಾಮ ತನ್ನ ಮಂದಿರವನ್ನು ನಿರ್ಮಿಸಲು ತನ್ನ ಭಕ್ತನಾದ ಅವರನ್ನು (ಪ್ರಧಾನಿ ಮೋದಿ) ಆಯ್ಕೆ ಮಾಡಿಕೊಂಡಿದ್ದಾನೆ. ನಾನು ಈ ಯಾತ್ರೆಯಲ್ಲಿ ಸಾರಥಿಯಾಗಿದ್ದೆ ಅಷ್ಟೆ. ಯಾತ್ರೆ ನಡೆಯುವಾಗ ಅವರು ಹೆಚ್ಚು ಪ್ರಸಿದ್ಧರಾಗಿರಲಿಲ್ಲ. ಅಯೋಧ್ಯೆಯಲ್ಲಿ ಒಂದಲ್ಲಾ ಒಂದು ದಿನ ಖಂಡಿತವಾಗಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾಗಬೇಕು ಎಂಬುದು ವಿಧಿ ಲಿಖಿತವಾಗಿದೆ" ಎಂದು ಲೇಖನದಲ್ಲಿ ಉಲ್ಲೇಖಿಸಿದ್ದಾಗಿ ತಿಳಿದುಬಂದಿದೆ.
"ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನ ವಿಗ್ರಹವನ್ನು ಮಂದಿರದಲ್ಲಿ ಪ್ರತಿಷ್ಠಾಪಿಸಿದಾಗ, ಅವರು ದೇಶದ ಪ್ರತಿಯೊಬ್ಬ ನಾಗರಿಕರನ್ನು ಪ್ರತಿನಿಧಿಸುತ್ತಾರೆ. ಈ ಮೂಲಕ ದಮನಿತರ ಆಸೆಗಳು ಸಹ ಈಡೇರುತ್ತವೆ. ಶ್ರೀರಾಮನ ಸದ್ಗುಣಗಳನ್ನು ಅಳವಡಿಸಿಕೊಳ್ಳಲು ಎಲ್ಲಾ ಭಾರತೀಯರನ್ನು ಪ್ರೇರೇಪಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ. ಜೊತೆಗೆ ಮಂದಿರ ಕನಸನ್ನು ಸಾಕಾರಗೊಳಿಸಿದ ಪ್ರಧಾನಿ ಮೋದಿ ಅವರಿಗೆ ಅಭಿನಂದಿಸಿದ್ದಾರೆ.
96 ವರ್ಷದ ಅಡ್ವಾಣಿ ಅವರು ಅಯೋಧ್ಯೆಯಲ್ಲಿ ಜನವರಿ 22 ಎಂದು ನಡೆಯುವ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಅಡ್ವಾಣಿ ಅವರು ಬರೆದಿರುವ ಲೇಖನ ಜನವರಿ 16ರ ನಿಯತಕಾಲಿಕೆಯಲ್ಲಿ ಪ್ರಕಟವಾಗಲಿದೆ. ಅದರ ಪ್ರತಿಯನ್ನು ಮಂದಿರ ಉದ್ಘಾಟನೆ ದಿನ ಬರುವ ಭಕ್ತರಿಗೆ ಹಂಚಲಾಗುವುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ರಾಮ ಮಂದಿರ ಉದ್ಘಾಟನೆಗೂ ಮುನ್ನ 11 ದಿನಗಳ ವಿಶೇಷ ಧಾರ್ಮಿಕ ವ್ರತ ಕೈಗೊಂಡ ಮೋದಿ