ಗುಂಟೂರು (ಆಂಧ್ರ ಪ್ರದೇಶ): ಕಳ್ಳತನ ಮಾಡುವವರು ಕೂಡ ತುಂಬಾ ಚಾಲಾಕಿಗಳು ಇರುತ್ತಾರೆ ಎಂಬುದಕ್ಕೆ ಇಲ್ಲೊಂದು ತಾಜಾ ನಿದರ್ಶನವಿದೆ. ಕಳ್ಳತನ ಗಮನಿಸಿ ಬೊಗಳಲು ಶುರು ಮಾಡಿದ ನಾಯಿಗೆ ಚಿಕನ್ ಪೀಸ್ ಹಾಕಿ ಖದೀಮರು ಅದರ ಬಾಯಿ ಮುಚ್ಚಿಸಿ 20 ಲಕ್ಷ ರೂಪಾಯಿಗಳೊಂದಿಗೆ ಪರಾರಿಯಾಗಿದ್ದಾರೆ.
ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಈ ಖತರ್ನಾಕ್ ಕಳ್ಳತನ ನಡೆದಿದೆ. ಇಲ್ಲಿನ ಪ್ರಸಿದ್ಧ ಮೆಣಸಿನಕಾಯಿ ರಫ್ತು ಕಂಪನಿಗೆ ಶನಿವಾರ ತಡರಾತ್ರಿ 2.30ರ ಸುಮಾರಿಗೆ ಇಬ್ಬರು ಕಳ್ಳರು ನುಗ್ಗಿದ್ದಾರೆ. ಬೈಕ್ನಲ್ಲಿ ಬಂದ ಕಳ್ಳರನ್ನು ಗಮನಿಸಿದ ಕಂಪನಿಯ ಕಾವಲುಗಾರ ಕೂಗಿ ತಡೆಯಲು ಪ್ರಯತ್ನಿಸಿದ್ದಾರೆ. ಆದರೆ, ಈ ಕಳ್ಳರು ಕಾವಲುಗಾರನ ಕೈಗಳನ್ನು ಹಗ್ಗದಿಂದ ಕಟ್ಟಿ ಹಾಕಿ ಕಿರುಚಿದರೆ ಸಾಯಿಸುತ್ತೇವೆ ಎಂದು ತಮ್ಮ ಬಳಿಯಿದ್ದ ಬ್ಲೇಡ್‌ನಿಂದ ಬೆದರಿಕೆ ಹಾಕಿದ್ದಾರೆ.
ಅಲ್ಲದೇ, ಕಾವಲುಗಾರನ ಬಳಿ ಓರ್ವ ಕಳ್ಳ ನಿಂತುಕೊಂಡು, ಮತ್ತೋರ್ವ ಕಂಪನಿಯ ಮುಖ್ಯ ಗೇಟ್‌ನ ಬೀಗವನ್ನು ಕತ್ತರಿಸಿ ಒಳಗೆ ನುಗ್ಗಿದ್ದಾನೆ. ಹಣವಿದ್ದ ಕಬೋರ್ಡ್‌ನ ಬೀಗವನ್ನು ಮುರಿದು ಅದರಲ್ಲಿದ್ದ ನಗದನ್ನು ದೋಚಿದ್ದಾನೆ. ಹಣ ದೋಚಿ ಹೊರಗೆ ಹೋಗುವಾಗ ಅಲ್ಲೇ ಇದ್ದ ಕಂಪನಿಯ ಶ್ವಾನ ಬೊಗಳಲು ಆರಂಭಿಸಿದೆ. ಆಗ ಈ ಖದೀಮರು ತಾವು ತಂದಿದ್ದ ಕೋಳಿ ಮಾಂಸದ ತುಂಡುಗಳನ್ನು ನಾಯಿಗೆ ಹಾಕಿ, ಬೈಕ್ನಲ್ಲಿ ಪರಾರಿಯಾಗಿದ್ದಾರೆ.
ಈ ಕಳ್ಳರು 20 ಲಕ್ಷಕ್ಕೂ ಅಧಿಕ ನಗದು ಹಣ ದೋಚಿದ್ದಾರೆ ಎಂದು ಕಂಪನಿಯ ಮಾಲೀಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕೃತ್ಯವನ್ನು ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಟಿಕ್ಟಾಕ್ ಹನಿಟ್ರ್ಯಾಪ್: ಮದುವೆ ಹೆಸರಲ್ಲಿ ಲಕ್ಷಾಂತರ ಹಣ ವಸೂಲಿ, ಆರೋಪಿ ಬಂಧನ