ಕರ್ನಾಟಕ

karnataka

ETV Bharat / bharat

ಗೂಢಚಾರಿಕೆ ಆರೋಪ: ಇಬ್ಬರು ಕಾಶ್ಮೀರಿ ಯುವಕರ ಬಂಧಿಸಿದ ಪಾಕ್!

ಭಾರತೀಯ ಗುಪ್ತಚರ ಸಂಸ್ಥೆ 'ರಾ' ಪರವಾಗಿ ಪಾಕಿಸ್ತಾನದಲ್ಲಿ ಗೂಢಚಾರಿಕೆ ಮಾಡುತ್ತಿದ್ದ ಸಂಶಯದ ಮೇಲೆ ಕಾಶ್ಮೀರ ಕಣಿವೆಯ ಇಬ್ಬರು ಯುವಕರನ್ನು ಪಾಕ್ ಪೊಲೀಸರು ಬಂಧಿಸಿರುವುದಾಗಿ ಗಿಲ್ಗಿಟ್ ಪ್ರಾಂತ್ಯದ ಹಿರಿಯ ಪೊಲೀಸ್ ಸುಪರಿಂಟೆಂಡೆಂಟ್ ಖಚಿತ ಪಡಿಸಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

By

Published : Jun 13, 2020, 1:23 PM IST

Updated : Jun 13, 2020, 3:13 PM IST

Indian spy agency Research and Analysis Wing
Indian spy agency Research and Analysis Wing

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ತನ್ನ ದೇಶದಲ್ಲಿ ಭಾರತದ ಪರವಾಗಿ ಗೂಢಚಾರಿಕೆ ಮಾಡುತ್ತಿದ್ದ ಉತ್ತರ ಕಾಶ್ಮೀರ ಭಾಗದ ಇಬ್ಬರು ಯುವಕರನ್ನು ಬಂಧಿಸಿರುವುದಾಗಿ ಪಾಕಿಸ್ತಾನ ಪೊಲೀಸರು ಶುಕ್ರವಾರ ಹೇಳಿಕೊಂಡಿದ್ದಾರೆ. ಬಾಂದಿಪೋರಾ ಜಿಲ್ಲೆಯ ಗುರೆಜ್ ಪಟ್ಟಣದ ನಿವಾಸಿಗಳಾದ ನೂರ್ ಮುಹಮ್ಮದ್ ವಾನಿ ಮತ್ತು ಫಿರೋಜ್ ಅಹ್ಮದ್ ಲೋನ್ ಬಂಧಿತ ಯುವಕರಾಗಿದ್ದಾರೆ.

ಭಾರತೀಯ ಗುಪ್ತಚರ ಸಂಸ್ಥೆ 'ರಾ' ಪರವಾಗಿ ಪಾಕಿಸ್ತಾನದಲ್ಲಿ ಗೂಢಚಾರಿಕೆ ಮಾಡುತ್ತಿದ್ದ ಸಂಶಯದ ಮೇಲೆ ಕಾಶ್ಮೀರ ಕಣಿವೆಯ ಇಬ್ಬರು ಯುವಕರನ್ನು ಪಾಕ್ ಪೊಲೀಸರು ಬಂಧಿಸಿರುವುದಾಗಿ ಗಿಲ್ಗಿಟ್ ಪ್ರಾಂತ್ಯದ ಹಿರಿಯ ಪೊಲೀಸ್ ಸುಪರಿಂಟೆಂಡೆಂಟ್ ಖಚಿತ ಪಡಿಸಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

"ನಮ್ಮ ಹುಡುಗ ಕಾಣೆಯಾದ ಎರಡು ವರ್ಷಗಳ ನಂತರ ಆತನ ಬಗ್ಗೆ ನಾವು ಕೇಳುತ್ತಿರುವ ಈ ಸುದ್ದಿ ನಮಗೆ ಆಘಾತ ತಂದಿದೆ." ಎಂದು ನಿಯಂತ್ರಣ ರೇಖೆಯ ಆಚೆ ಗೂಢಚಾರಿಕೆ ಆರೋಪದ ಮೇಲೆ ಬಂಧಿಸಲ್ಪಟ್ಟ ಯುವಕನ ಕುಟುಂಬ ಸದಸ್ಯರೋರ್ವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಪಾಕ್​ನಲ್ಲಿ ಬಂಧಿತ ಭಾರತೀಯ ಯುವಕ ಫಿರೋಜ್​ನ ಹಿರಿಯ ಸಹೋದರ ಜಹೂರ್ ಅಹ್ಮದ್ ಲೋನ್ ಈಟಿವಿ ಭಾರತ್​ನೊಂದಿಗೆ ಮಾತನಾಡಿ, "ನಮ್ಮ ಸಹೋದರ ನವೆಂಬರ್ 2018 ರಿಂದ ಕಾಣೆಯಾಗಿದ್ದಾನೆ. ಈ ಕುರಿತು ನಾವು ಪೊಲೀಸ್ ದೂರನ್ನು ಸಹ ದಾಖಲಿಸಿದ್ದೇವೆ. ನಾನಾವಾಗ ಜಮ್ಮುವಿನಲ್ಲಿದ್ದೆ. ಆತ ಕಾಣೆಯಾದ ವಿಷಯವನ್ನು ಕುಟುಂಬಸ್ಥರು ನನಗೆ ತಿಳಿಸಿದ್ದರು." ಎಂದು ಹೇಳಿದ್ದಾರೆ.

ಬಂಧಿತ ಫಿರೋಜ್, ಗುರೆಜ್ ಪ್ರದೇಶದ ಅಚುರಾ ಬಳಿಯ ಶಾಹಪುರ ಗ್ರಾಮದ ನಿವಾಸಿಯಾಗಿದ್ದು, 2018 ರವರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಈತನ ತಂದೆ ರೈತನಾಗಿದ್ದು, ಫಿರೋಜ್​ಗೆ ಮೂವರು ಸಹೋದರರು ಹಾಗೂ ಆರು ಜನ ಸಹೋದರಿಯರು ಇದ್ದಾರೆ.

ಫಿರೋಜ್ ಕಾಣೆಯಾದ ನಂತರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಆಗಾಗ ಠಾಣೆಗೆ ಭೇಟಿ ನೀಡಿ ಆತನ ಬಗ್ಗೆ ನಾನೇ ಖುದ್ದಾಗಿ ವಿಚಾರಿಸುತ್ತಿದ್ದೆ ಎಂದು ಜಹೂರ್ ಹೇಳಿದ್ದಾರೆ.

"ಫಿರೋಜ್ ಕಾಣೆಯಾದ ನಂತರ ತನಿಖೆ ನಡೆಸಿದ ಪೊಲೀಸರು, ಆತನ ಫೋನ್ ಕರೆಗಳನ್ನಾಧರಿಸಿ ಹಲವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. 175 ಪ್ರಾದೇಶಿಕ ಸೈನ್ಯದಲ್ಲಿ ಕೆಲಸ ಮಾಡುವ ರೌಫ್ ಅಹ್ಮದ್ ಎಂಬಾತನಿಗೆ ಫಿರೋಜ್ ಕಾಣೆಯಾಗುವ ಮುನ್ನ ಕೊನೆಯ ಕರೆ ಮಾಡಿದ್ದಾಗಿ ತಿಳಿದು ಬಂದಿತ್ತು. ಆಗ ರೌಫ್​ನನ್ನು ಸಹ ಪೊಲೀಸರು ವಿಚಾರಣೆ ಮಾಡಿದ್ದರು. ಆದರೆ ಈಗ ಫಿರೋಜ್ ಎಲ್ಲವನ್ನೂ ತಾನೇ ಒಪ್ಪಿಕೊಳ್ಳುತ್ತಿರುವುದನ್ನು ನೋಡಿದರೆ, ಪ್ರಾದೇಶಿಕ ಸೈನ್ಯದ ವ್ಯಕ್ತಿಯೇ ಆತನನ್ನು ಬಲವಂತ ಮಾಡಿದಂತೆ ಕಾಣುತ್ತದೆ." ಎಂದು ಜಹೂರ್ ಆರೋಪಿಸಿದ್ದಾನೆ.

ಪ್ರಾದೇಶಿಕ ಸೈನ್ಯದ ರೌಫ್ ಎಂಬಾತನೇ ಫಿರೋಜ್ ನಿಯಂತ್ರಣ ರೇಖೆ ದಾಟಿ ಹೋಗುವಂತೆ ಮಾಡಿದ್ದಾನೆ. ಆತನ ವಿರುದ್ಧವೂ ನಾವು ದೂರು ದಾಖಲಿಸಲಿದ್ದೇವೆ ಎನ್ನುತ್ತಾನೆ ಜಹೂರ್.

ಬಂಧಿತ ಫಿರೋಜ್ ಸಹೋದರ ಜಹೂರ್ ಇನ್ನೊಂದು ವಿಚಿತ್ರ ಹೇಳಿಕೆ ನೀಡಿದ್ದು, ತನ್ನ ಸಹೋದರನನ್ನು ಓರ್ವ ಮಹಿಳೆ ಹಾಗೂ ಆಕೆಯ ಸಂಗಾತಿ ಸೇರಿ ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದರೆಂದೂ, ಅದನ್ನೇ ತಾವು ನಂಬಿದ್ದೆವು ಎಂದೂ ಹೇಳಿದ್ದಾನೆ.

ಈ ಕುರಿತ ಸತ್ಯಾಸತ್ಯತೆಗಳ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಸೇನೆ ಹಾಗೂ ಪೊಲೀಸ್ ಅಧಿಕಾರಿಗಳು ಈಟಿವಿ ಭಾರತ್​ಗೆ ತಿಳಿಸಿದ್ದಾರೆ. "ಭಾರತೀಯ ಯುವಕರ ಬಂಧನ ಕುರಿತಂತೆ ನಿಖರ ಮಾಹಿತಿಗಳಿಗಾಗಿ ಕಾಯಲಾಗುತ್ತಿದೆ. ತನಿಖೆಯ ನಂತರ ಪ್ರಕರಣದ ಮಾಹಿತಿ ನೀಡುತ್ತೇವೆ." ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಹೇಳಿದರು.

Last Updated : Jun 13, 2020, 3:13 PM IST

ABOUT THE AUTHOR

...view details