ನವದೆಹಲಿ:ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನರಾದ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ಅಂತಿಮ ದರ್ಶನಕ್ಕೆ ಪ್ರಧಾನಿ ಮೋದಿ ಆಗಮಿಸಿ ಅಂತಿಮ ನಮನ ಸಲ್ಲಿಸಿದ್ದಾರೆ.
ಪ್ರಧಾನಿ ಮೋದಿ ಅಂತಿಮ ನಮನ ಸಲ್ಲಿಸುವ ವೇಳೆ ಭಾವುಕರಾಗಿದ್ದು ಕಂಡುಬಂತು. ಮೋದಿ ಸರ್ಕಾರದ ಮೊದಲನೇ ಅವಧಿಯಲ್ಲಿ ವಿದೇಶಾಂಗ ಇಲಾಖೆಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿ ಮೋದಿ ಸೇರಿದಂತೆ ಹಲವು ನಾಯಕರ ಮನ ಗೆದ್ದಿದ್ದರು ಸುಷ್ಮಾ ಸ್ವರಾಜ್.
ಅಂತಿಮ ನಮನದ ವೇಳೆ ಭಾವುಕರಾದ ಮೋದಿ ಸುಷ್ಮಾ ಸ್ವರಾಜ್ ನಿವಾಸಕ್ಕೆ ಆಗಮಿಸಿದ ಪ್ರಧಾನಿ ಮೋದಿ ಕುಟುಂಬಸ್ಥರ ಜೊತೆಗೆ ಕೆಲ ಕ್ಷಣಗಳನ್ನು ಕಳೆದರು. ಈ ವೇಳೆ ಮೋದಿ ಮುಖದಲ್ಲಿ ದುಃಖ ಎದ್ದು ಕಾಣಿಸುತ್ತಿತ್ತು. ದುಃಖವನ್ನು ತಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಹೊರನಡೆದರು.
ಅನಾರೋಗ್ಯ ಕಾರಣದಿಂದ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್ ಸ್ಪರ್ಧೆ ಮಾಡಿರಲಿಲ್ಲ. ವಿದೇಶಾಂಗ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದ ಸುಷ್ಮಾ ಸ್ವರಾಜ್ಗೆ ಮೋದಿ 2.0ನಲ್ಲೂ ಉತ್ತಮ ಖಾತೆ ದೊರೆಯುವ ಎಲ್ಲ ಸಾಧ್ಯತೆ ಇತ್ತು. ಆದರೆ ಆರೋಗ್ಯ ಕೈಕೊಟ್ಟಿದ್ದರಿಂದ ಇದು ಕೈಗೂಡಲಿಲ್ಲ.