ಮಿರ್ಜಾಪುರ(ಉತ್ತರಪ್ರದೇಶ):ಭಾನುವಾರದಂದು ರಾಂಪುರ್ ಅಟಾರಿ ಗ್ರಾಮದ ಶಾಲೆಯೊಂದರಲ್ಲಿ ಬಿಸಿಯೂಟ ತಯಾರಿಸುವ ಪಾತ್ರೆಗೆ ಮೂರು ವರ್ಷದ ಬಾಲಕಿಯೋರ್ವಳು ಬಿದ್ದು, ಸಾವನ್ನಪ್ಪಿರುವ ಘಟನೆ ರಾಂಪುರ್ ಅಟಾರಿ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಅಂಚಲ್ ಎಂದು ಗುರುತಿಸಲಾಗಿದೆ. ಬಾಲಕಿ ಪಾತ್ರೆಯಲ್ಲಿ ಬಿದ್ದಾಗ ಅಡುಗೆ ಸಿಬ್ಬಂದಿ ತಮ್ಮ ಕಿವಿಗೆ ಇಯರ್ ಫೋನ್ ಹಾಕಿಕೊಂಡಿದ್ದರು. ಬಾಲಕಿಯ ಆರ್ತನಾದ ಕೇಳಿಸಿಕೊಳ್ಳದೇ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಮಿರ್ಜಾಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಶೀಲ್ ಕುಮಾರ್ ಪಟೇಲ್ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಶಾಲೆಯ ಮುಖ್ಯೋಪಾಧ್ಯಾಯರನ್ನು ತಕ್ಷಣವೇ ಅಮಾನತುಗೊಳಿಸುವಂತೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ. ಅಲ್ಲದೇ, ಶಿಕ್ಷಣಾಧಿಕಾರಿಗೆ ಎಫ್ಐಆರ್ ದಾಖಲಿಸುವಂತೆ ಸೂಚಿಸಲಾಗಿದೆ. ಬೇಜವಾಬ್ದಾರಿ ಕೆಲಸಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದಾರೆ.
ಮಿರ್ಜಾಪುರ ಶಿಕ್ಷಣಾಧಿಕಾರಿ ವೀರೇಂದ್ರ ಕುಮಾರ್ ಸಿಂಗ್ ಮಾತನಾಡಿ, ವಿಷಯ ನನ್ನ ಗಮನಕ್ಕೆ ಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. ಮೃತ ಬಾಲಕಿ ಆ ಶಾಲೆಯ ವಿದ್ಯಾರ್ಥಿನಿಯಲ್ಲವೆಂಬ ಮಾಹಿತಿ ಬಂದಿದೆಯೆಂದು ಅವರು ಹೇಳಿದ್ದಾರೆ.