ಅಯೋಧ್ಯೆ (ಉತ್ತರ ಪ್ರದೇಶ):ಭಾರತೀಯ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಆರಂಭಗೊಂಡಿದ್ದು, ಸರಯೂ ನದಿ ತೀರದಲ್ಲಿ ಇಲ್ಲಿಯವರೆಗೆ ತಾತ್ಕಾಲಿಕ ಟೆಂಟ್‌ನಲ್ಲಿ ವಾಸವಿದ್ದ ಶ್ರೀರಾಮನಿಗೆ ಭವ್ಯ ಮಂದಿರ ನಿರ್ಮಾಣವಾಗಲಿದೆ ಎಂದರು.
ರಾಮಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಭಾಷಣ 'ಹಿರಿಯರ ತ್ಯಾಗ, ಬಲಿದಾನದಿಂದ ಮಂದಿರ ಕನಸು ನನಸು'
ರಾಮ ಲಲ್ಲಾನಿಗಾಗಿ ಮುಂದಿನ ದಿನಗಳಲ್ಲಿ ಭವ್ಯ ದೇಗುಲ ನಿರ್ಮಾಣವಾಗುತ್ತಿದೆ. ಈ ಮೂಲಕ ಕೋಟ್ಯಂತರ ಭಾರತೀಯರ ಹಲವು ವರ್ಷಗಳ ಕಾಯುವಿಕೆ ಕೊನೆಗೂಳ್ಳಲಿದೆ. ಇಂದು ಇಡೀ ದೇಶವೇ ರೋಮಾಂಚನಗೊಂಡಿದೆ. ಹಿರಿಯರ ತ್ಯಾಗ, ಬಲಿದಾನದಿಂದ ಇಂದು ರಾಮಮಂದಿರದ ಕನಸು ನನಸಾಗುತ್ತಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವ ಅವಕಾಶ ನನಗೆ ಸಿಕ್ಕಿದೆ ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.
ರಾಮಮಂದಿರ ಹೋರಾಟದಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ನಾನು ನಮಿಸುತ್ತೇನೆ. ಅವರೆಲ್ಲರ ಪರಿಶ್ರಮದಿಂದಲೇ ಮಂದಿರ ನಿರ್ಮಾಣಕ್ಕೆ ಅಯೋಧ್ಯೆ ಮುಕ್ತವಾಗಿದೆ ಎಂದರು.
ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮೋದಿ 'ಪ್ರತಿಯೊಬ್ಬ ಭಾರತೀಯನಲ್ಲೂ ಶ್ರೀರಾಮನಿದ್ದಾನೆ'
ಪ್ರತಿಯೊಬ್ಬ ಭಾರತೀಯರಲ್ಲೂ ಶ್ರೀರಾಮನಿದ್ದಾನೆ. ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮನ ಭವ್ಯ ಮಂದಿರ ನಿರ್ಮಾಣಗೊಳ್ಳುವ ಮೂಲಕ ಭಾರತದ ಸಂಸ್ಕೃತಿ ಮತ್ತೊಮ್ಮೆ ವಿಶ್ವದೆಲ್ಲಡೆ ವಿಜೃಂಭಿಸಲಿದೆ. 130 ಕೋಟಿ ಭಾರತೀಯರ ಹೋರಾಟಕ್ಕೆ ಜಯ ಸಿಕ್ಕಿದ್ದು, ಪ್ರತಿಯೊಂದು ಕಾರ್ಯದಲ್ಲೂ ನಾವು ಶ್ರೀರಾಮನ ಕಾಣುತ್ತೇವೆ ಎಂದು ಹೇಳಿದರು.
ಅಯೋಧ್ಯೆಯಲ್ಲಿ ಸಸಿ ನೆಟ್ಟು ನೀರುಣಿಸಿದ ಪ್ರಧಾನಿ ನರೇಂದ್ರ ಮೋದಿ 'ತ್ಯಾಗ, ಬಲಿದಾನದ ಪ್ರತೀಕ'
ಸ್ವಾತಂತ್ರ್ಯ ಹೋರಾಟದಲ್ಲಿ ಸಾಕಷ್ಟು ಜನರು ತಮ್ಮ ಪ್ರಾಣಾರ್ಪಣೆ ಮಾಡಿದ್ದು, ಆ ವೇಳೆ ದೇಶದ ಎಲ್ಲ ಪ್ರದೇಶಗಳಿಂದಲೂ ಹೋರಾಟ ನಡೆದಿತ್ತು. ಅದೇ ರೀತಿ ಮಂದಿರ ನಿರ್ಮಾಣಕ್ಕಾಗಿಯೂ ಎಲ್ಲರೂ ಪ್ರಯತ್ನಿಸಿದ್ದಾರೆ. ಈ ಪವಿತ್ರ ದಿನ ಅವರ ತ್ಯಾಗ, ಬಲಿದಾನದ ಪ್ರತೀಕವಾಗಿದೆ. ದೇಶದಲ್ಲಿ ಅನೇಕ ಬಾರಿ ಶ್ರೀರಾಮನ ಅಸ್ತಿತ್ವಕ್ಕೆ ಧಕ್ಕೆ ಉಂಟುಮಾಡುವ ಕೆಲಸ ನಡೆದಿದೆ. ಆದರೆ ಇವತ್ತು ಕೋಟ್ಯಂತರ ರಾಮಭಕ್ತರ ಸಂಕಲ್ಪ ಸತ್ಯವಾದ ದಿನ. ಸತ್ಯ, ಅಹಿಂಸೆ ಮತ್ತು ಬಲಿದಾನಕ್ಕೆ ಸಿಕ್ಕ ಗೌರವ ಎಂದು ತಿಳಿಸಿದರು.
ಅಯೋಧ್ಯೆಯಿಂದ ಪ್ರವಾಸೋದ್ಯಮಕ್ಕೆ ಬಲ:
ದೇಗುಲ ನಿರ್ಮಾಣದ ಮೂಲಕ ಉತ್ತರ ಪ್ರದೇಶದಲ್ಲಿ ಪ್ರವಾಸೋದ್ಯಮವೂ ಅಭಿವೃದ್ಧಿ ಹೊಂದಲಿದ್ದು, ಆರ್ಥಿಕಾಭಿವೃದ್ಧಿ ಆಗಲಿದೆ ಎಂದು ಪ್ರಧಾನಿ ಇದೇ ವೇಳೆ ಹೇಳಿದರು.