ಕರ್ನಾಟಕ

karnataka

ಜಾಧವ್ ಪ್ರಕರಣದಲ್ಲಿ ಪಾಕ್​​​ಗೆ ಮರ್ಮಾಘಾತ; ಪಾಕ್  ನಿಯಮ ಉಲ್ಲಂಘಿಸಿದೆ ಎಂದ ಅಂತಾರಾಷ್ಟ್ರೀಯ ನ್ಯಾಯಮಂಡಳಿ

ಈ ಹಿಂದೆ ಅಂತಾರಾಷ್ಟ್ರೀಯ ನ್ಯಾಯಮಂಡಳಿ ಮುಖ್ಯ ನ್ಯಾಯಮೂರ್ತಿ ಅಬ್ದುಲ್ಖಾವಿ ಯೂಸುಫ್ ನೇತೃತ್ವದ ನ್ಯಾಯಪೀಠವು ಕುಲಭೂಷಣ್ ಜಾಧವ್ ಅವರ ಅಪರಾಧ ಮತ್ತು ಶಿಕ್ಷೆ ಮರುಪರಿಶೀಲನೆ ಹಾಗೂ ಮರು ವಿಚಾರಣೆಗೆ ಪಾಕಿಸ್ತಾನಕ್ಕೆ ಆದೇಶಿಸಿತ್ತು. ಆದರೆ ಇದಕ್ಕೆ ಕಿವಿಗೊಡದ ಪಾಕಿಸ್ತಾನ, ಜಾಧವ್ ಪ್ರಕರಣದಲ್ಲಿ ತನ್ನ ಜವಾಬ್ದಾರಿಗಳನ್ನು ಉಲ್ಲಂಘಿಸಿದೆ ಎಂದು ಹೇಗ್​ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಮಂಡಳಿ ಮುಖ್ಯ ನ್ಯಾಯಮೂರ್ತಿ ಯೂಸುಫ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಮಾಹಿತಿ ನೀಡಿದ್ದಾರೆ.

By

Published : Oct 31, 2019, 2:13 PM IST

Published : Oct 31, 2019, 2:13 PM IST

Updated : Nov 1, 2019, 7:10 AM IST

ಕುಲಭೂಷಣ್ ಜಾಧವ್

ವಾಷಿಂಗ್ಟನ್​(ಅಮೆರಿಕ):ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪ್ರಕರಣದಲ್ಲಿ ಪಾಕಿಸ್ತಾನ ತನ್ನ ಜವಾಬ್ದಾರಿಗಳನ್ನು ಉಲ್ಲಂಘಿಸಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಮಂಡಳಿ (ಐಸಿಜೆ) ಅಧ್ಯಕ್ಷತೆ ವಹಿಸಿರುವ ನ್ಯಾಯಮೂರ್ತಿ ಅಬ್ದುಲ್ಖಾವಿ ಯೂಸುಫ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆ(UNGA)ಯಲ್ಲಿ ಈ ಬಗ್ಗೆ ವರದಿ ಸಲ್ಲಿಕೆ ಮಾಡಿದ್ದಾರೆ.

193 ಸದಸ್ಯರಿದ್ದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬುಧವಾರ ಅಂತಾರಾಷ್ಟ್ರೀಯ ನ್ಯಾಯ ಮಂಡಳಿ ತನ್ನ ವರದಿಯನ್ನು ಮಂಡಿಸಿದೆ. ವಿಶ್ವಸಂಸ್ಥೆಯ ಪ್ರಮುಖ ಅಂಗವಾಗಿರುವ ಅಂತಾರಾಷ್ಟ್ರೀಯ ನ್ಯಾಯಮಂಡಳಿ, ತನ್ನ ತೀರ್ಪಿನಲ್ಲಿ, 'ವಿಯೆನ್ನಾ ಸಮಾವೇಶ'ದ 36 ನೇ ಪರಿಚ್ಛೇದದ ಅಡಿಯಲ್ಲಿ ಪಾಕಿಸ್ತಾನ ತನ್ನ ಜವಾಬ್ದಾರಿಗಳನ್ನು ಉಲ್ಲಂಘಿಸಿದೆ ಎಂಬುದನ್ನ ಸಾಮಾನ್ಯಸಭೆಯ ಗಮನಕ್ಕೆ ತಂದಿದೆ.

ಜಾಧವ್ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪಿನ ಹಲವಾರು ಅಂಶಗಳನ್ನು ನ್ಯಾಯಮಂಡಳಿ ಅಧ್ಯಕ್ಷ ನ್ಯಾ. ಯೂಸುಫ್ ತಮ್ಮ ವರದಿಯ ಮೂಲಕ ಸಾಮಾನ್ಯ ಸಭೆಯಲ್ಲಿ ಮಂಡಿಸಿದರು. ಈ ಹಿಂದೆಯೂ ಯೂಸುಫ್ ನೇತೃತ್ವದ ನ್ಯಾಯಪೀಠವು ಕುಲಭೂಷಣ್ ಜಾಧವ್ ಅವರ ಅಪರಾಧ ಮತ್ತು ಶಿಕ್ಷೆಯ ಪರಿಣಾಮಕಾರಿ ಮರುಪರಿಶೀಲನೆಗೆ ಪಾಕಿಸ್ತಾನಕ್ಕೆ ಆದೇಶಿಸಿತ್ತು.

ಏನಿದು ಪ್ರಕರಣ...

ನೌಕೌಪಡೆಯ ಮಾಜಿ ಅಧಿಕಾರಿಕುಲಭೂಷಣ್ ಜಾಧವ್​ ಅವರನ್ನು ಪಾಕಿಸ್ತಾನ 2016ರ ಮಾರ್ಚ್​ 3ರಂದು ಬಲೂಚಿಸ್ತಾನ ಪ್ರಾಂತ್ಯದಲ್ಲಿ ವಶಕ್ಕೆ ಪಡೆದಿತ್ತು. ಆದರೆ, ಇರಾನ್​​ನಿಂದ ಕುಲಭೂಷಣ್​ರನ್ನು ಅಪಹರಿಸಲಾಗಿದೆ ಎಂದು ಭಾರತ ಹೇಳಿತ್ತು. ಕುಲಭೂಷಣ್​​​ ಜಾಧವ್​ ಮೇಲೆ ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪವನ್ನು ಹೊರಿಸಿದ ಪಾಕಿಸ್ತಾನದ ಮಿಲಿಟರಿ ಕೋರ್ಟ್​ ಜಾಧವ್​​ಗೆ ಗಲ್ಲುಶಿಕ್ಷೆ ವಿಧಿಸಿತ್ತು. ಮಿಲಿಟರಿ ಕೋರ್ಟ್​ ಆದೇಶವನ್ನು ಪ್ರಶ್ನಿಸಿ ಭಾರತ 2017ರ ಮೇ 8ರಂದು ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯ ಇದೇ ವರ್ಷದ ಫೆಬ್ರವರಿಯಲ್ಲಿ ನಾಲ್ಕು ದಿನ ಸತತವಾಗಿ ವಿಚಾರಣೆ ನಡೆಸಿ, ಪಾಕಿಸ್ತಾನಕ್ಕೆ ಜಾಧವ್​ ಶಿಕ್ಷೆ ಮರು ಪರಿಶೀಲನೆ ಹಾಗೂ ಮರು ವಿಚಾರಣೆಗೆ ಆದೇಶಿಸಿತ್ತು. ಅಷ್ಟೇ ಅಲ್ಲದೇ ವಿಯನ್ನಾ ಒಪ್ಪಂದದ ಪ್ರಕಾರ ಜಾಧವ್​ಗೆ ವಕೀಲರ ವ್ಯವಸ್ಥೆ ಮಾಡುವಂತೆ ಆದೇಶಿಸಿ, ಗಲ್ಲು ಶಿಕ್ಷೆಯನ್ನ ತಡೆ ಹಿಡಿದಿತ್ತು.

Last Updated : Nov 1, 2019, 7:10 AM IST

ABOUT THE AUTHOR

...view details