ಕೋಲ್ಕತ್ತಾ:ಕೋವಿಡ್ -19 ಅಪಾಯ ವಲಯಗಳನ್ನು ನಿರ್ಣಯಿಸಲು ರಾಜ್ಯಕ್ಕೆ ಆಗಮಿಸಿರುವ ಅಂತರ್ ಸಚಿವಾಲಯದ ಕೇಂದ್ರ ತಂಡವನ್ನು (ಐಎಂಸಿಟಿ) ಪಶ್ಚಿಮ ಬಂಗಾಳ ಸರ್ಕಾರ ನಿರ್ಬಂಧಿಸಿದೆ ಎಂದು ಐಎಂಸಿಟಿ ಮುಖಂಡ ಅಪೂರ್ವ ಚಂದ್ರ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ರಚಿಸಿದ ಐಎಂಸಿಟಿ ತಂಡಗಳು ನಿರ್ಣಾಯಕ ಸಂಸ್ಥೆಗಳಾಗಿದ್ದು, ಮೌಲ್ಯಮಾಪನಕ್ಕಾಗಿ ಕೊರೊನಾ ವೈರಸ್ ಹಾಟ್ಸ್ಪಾಟ್ಗಳಿಗೆ ಭೇಟಿ ನೀಡುತ್ತವೆ. ಅಂತ ಪ್ರದೇಶಗಳಲ್ಲಿ ಮಾರಕ ವೈರಸ್ ಹರಡುವುದನ್ನು ಎದುರಿಸಲು ಕೈಗೊಳ್ಳುವ ಕ್ರಮಗಳ ಬಗ್ಗೆ ನಿರ್ದೇಶನ ನೀಡುತ್ತವೆ ಮತ್ತು ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುತ್ತವೆ.
'ನಾವು ನಿನ್ನೆ ಬೆಳಗ್ಗೆ ಇಲ್ಲಿಗೆ ಬಂದಿದ್ದೇವೆ ನಮಗೆ ಸಹಕಾರ ನೀಡುವಂತೆ ರಾಜ್ಯ ಸರ್ಕಾರವನ್ನು ಕೇಳುತ್ತಿದ್ದೇವೆ. ಇಲ್ಲಿಗೆ ಬಂದು ಒಂದು ದಿನಕ್ಕೂ ಹೆಚ್ಚಿನ ಸಮಯವಾಗಿದ್ದು, ಎರಡು ಸ್ಥಳಗಳಿಗೆ ಮಾತ್ರ ಭೇಟಿ ನೀಡಿದ್ದೇವೆ' ಎಂದು ಹೇಳಿದ್ದಾರೆ.
'ಐಎಂಸಿಟಿ ತಂಡಗಳು ಮಧ್ಯಪ್ರದೇಶ, ಮಹಾರಾಷ್ಟ್ರ, ಮತ್ತು ರಾಜಸ್ಥಾನಗಳಿಗೆ ಹೋಗಿವೆ, ಅಲ್ಲಿ ರಾಜ್ಯ ಸರ್ಕಾರಗಳಿಂದ ಸಂಪೂರ್ಣ ಬೆಂಬಲ ಸಿಗುತ್ತಿದೆ. ಅವರಿಗೆ ಪಶ್ಚಿಮ ಬಂಗಾಳದಂತೆಯೇ ನೋಟಿಸ್ ನೀಡಲಾಗಿದೆ . ಆದರೆ, ಅಲ್ಲಿ ಕೇಂದ್ರ ತಂಡಗಳು ಯಾವುದೇ ಸಮಸ್ಯೆಯನ್ನ ಎದುರಿಸಿಲ್ಲ. ಆದರೆ ಪಶ್ಚಿಮ ಬಂಗಾಳದಲ್ಲಿ ಅಗತ್ಯ ಸಹಕಾರ ಸಿಕ್ಕಿಲ್ಲ ಎಂದು ಚಂದ್ರ ಹೇಳಿದ್ದಾರೆ.
ಈ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ರಾಜೀವ್ ಸಿನ್ಹಾ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ, 'ಕೋಲ್ಕತಾ ಮತ್ತು ಜಲ್ಪೈಗುರಿಯಲ್ಲಿ ಐಎಂಸಿಟಿ ತಂಡಕ್ಕೆ ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳು ಅಗತ್ಯ ಸಹಕಾರವನ್ನು ನೀಡಿಲ್ಲ' ಎಂದು ತಿಳಿಸಿದ್ದಾರೆ.