ಕರ್ನಾಟಕ

karnataka

ETV Bharat / bharat

ರಾಮಮಂದಿರ ನಿರ್ಮಿಸಲು ಚಿನ್ನದ ಇಟ್ಟಿಗೆ ಕೊಡ್ತಾರಂತೆ ಕೊನೆಯ ಮೊಘಲ್​ ದೊರೆ.. - ಅಯೋಧ್ಯೆ

ಹಲವು ದಶಕಗಳಿಂದ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯಿರುವ ಜಾಗದಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬ ಕೂಗು ಗಟ್ಟಿಯಾಗಿ ಕೇಳಿಬರುತ್ತಿದೆ. ಅದು ಶ್ರೀರಾಮನ ಜನ್ಮ ಭೂಮಿ. ಅದು ನಮ್ಮ ಧಾರ್ಮಿಕ ಭಾವನೆಗಳಿಗೆ ಸೇರಿದ್ದು. ಹೀಗಾಗಿ ಮಸೀದಿಯನ್ನು ಒಡೆದು ಅಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ಹಿಂದು ಸಮುದಾಯದ ಜನರ ವಾದ. ಆದರೆ, ಈ ಪ್ರಕರಣ ಇನ್ನೂ ಸುಖಾಂತ್ಯ ಕಂಡಿಲ್ಲ. ಅಲ್ಲಿ ರಾಮಮಂದಿರವೋ ಅಥವಾ ಮಸೀದಿಯೋ ಅನ್ನೋದು ಪ್ರಶ್ನೆಯಾಗಿ ಉಳಿದಿದೆ. ಈ ನಡುವೆ ಮೊಘಲ್​ ವಂಶದ ರಾಜನೊಬ್ಬನ ಈ ಮಾತು ಮತ್ತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಆಸೆ ಚಿಗುರೊಡೆವಂತೆ ಮಾಡಿದೆ.

ರಾಮಮಂದಿರ ನಿರ್ಮಾಣಕ್ಕೆ ಚಿನ್ನದ ಇಟ್ಟಿಗೆ

By

Published : Aug 18, 2019, 9:35 PM IST

ಹೈದರಾಬಾದ್​:ಮೊಘಲ್​ ರಾಜವಂಶದ ಕಡೆಯ ದೊರೆಯಾದ ಹಬೀಬುದ್ದೀನ್​ ತೂಸಿ, ರಾಮ ಮಂದಿರದ ನಿರ್ಮಾಣಕ್ಕೆ ಚಿನ್ನದ ಇಟ್ಟಿಗೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಮೂಲಕ ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣಕ್ಕೆ ಬೆಂಬಲ ನೀಡುವುದಾಗಿ ಪರೋಕ್ಷವಾಗಿ ತಿಳಿಸಿದ್ದಾರೆ.

ಹಬೀಬುದ್ದೀನ್​ ತೂಸಿ

ಹೈದರಾಬಾದ್​ನಲ್ಲಿ ವಾಸಿಸುತ್ತಿರುವ ಮೊಘಲ್​ ರಾಜವಂಶದ ಕಡೆಯ ರಾಜ 50 ವರ್ಷದ ಹಬೀಬುದ್ದೀನ್​ ತೂಸಿ, ಬಾಬ್ರಿ ಮಸೀದಿ ಜಾಗದಲ್ಲಿ ರಾಮ ಮಂದಿರದ ನಿರ್ಮಾಣಕ್ಕಾಗಿ ಮೊದಲ ಇಟ್ಟಿಗೆಯನ್ನು ನೀಡುತ್ತೇನೆ. ಅದು ಕೂಡಾ ಚಿನ್ನದ ಇಟ್ಟಿಗೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಮಂದಿರ ನಿರ್ಮಾಣಕ್ಕೆ ಬೇಕಾದ ಎಲ್ಲಾ ಜಾಗವನ್ನೂ ನಾನು ಹಸ್ತಾಂತರ ಮಾಡಲು ಸಿದ್ಧ ಎಂದು ಖಾಸಗಿ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದಕ್ಕೆ ತೂಸಿ ಹೇಳಿದ್ದಾರೆ. ಕಳೆದ ವರ್ಷದ ಸೆಪ್ಟೆಂಬರ್​ ತಿಂಗಳಲ್ಲೇ ಚಿನ್ನದ ಇಟ್ಟಿಗೆ ನೀಡೋ ಬಗ್ಗೆ ತೂಸಿ ಹೇಳಿಕೊಂಡಿದ್ದರು.

ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಜೊತೆಗೆ ಹಬೀಬುದ್ದೀನ್​ ತೂಸಿ

ಬಾಬ್ರಿ ಮಸೀದಿ ವಿವಾದದಲ್ಲಿ ತನ್ನನ್ನು ಒಳಗೊಳ್ಳುವಂತೆ ತೂಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಇನ್ನೂ ಆಗಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇರೆ ಯಾವುದೇ ಪಕ್ಷ ಅಥವಾ ವ್ಯಕ್ತಿ ಆಸ್ತಿಯ ಮಾಲೀಕತ್ವದ ದಾಖಲೆಗಳನ್ನು ಹೊಂದಿಲ್ಲ. ಆದರೆ, ಮೊಘಲ್ ರಾಜರ ವಂಶಸ್ಥನಾಗಿ, ಭೂಮಿಯನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ನನಗಿದೆ ಎಂದು ತೂಸಿ ಹೇಳುತ್ತಾರೆ.

ರಾಮಮಂದಿರಕ್ಕೆ ಚಿನ್ನದ ಇಟ್ಟಿಗೆ ನೀಡುತ್ತೇನೆ ಎಂದ ಮೊಘಲ್​ ದೊರೆ

ಬಾಬ್ರಿ ಮಸೀದಿ ನಿರ್ಮಾಣ ಮಾಡಿದ್ದು ಯಾರು? ಮತ್ತು ಯಾರಿಗಾಗಿ?

ತೂಸಿ ಹೇಳುವ ಪ್ರಕಾರ, ಮೊದಲ ಮೊಘಲ್​ ದೊರೆಯಾದ ಬಾಬರ್​, 1529ರಲ್ಲಿ ಸೇನಾಪಡೆಗೆ ನಮಾಝ್​ ಅಥವಾ ಪ್ರಾರ್ಥನೆಯ ಉದ್ದೇಶದಿಂದಾಗಿ ಇಲ್ಲಿ ಅಂದರೆ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ನಿರ್ಮಾಣ ಮಾಡಿದರು. ಇದು ಕೇವಲ ಸೇನೆಯವರಿಗೆ ಮಾತ್ರವೇ ಹೊರತು ಇತರರಿಗಲ್ಲ. ಇಲ್ಲಿ ಮಸೀದಿ ನಿರ್ಮಾಣಕ್ಕೂ ಮುನ್ನ ಅಲ್ಲಿ ಏನಿತ್ತು ಎಂಬುದನ್ನು ನಾನು ತಿಳಿದುಕೊಳ್ಳಲು ಇಚ್ಛೆ ಪಡುವುದಿಲ್ಲ. ಆದರೆ, ಕೆಲ ಸಮುದಾಯವು ಅದು ರಾಮನ ಜನ್ಮ ಭೂಮಿ ಎಂದು ಉದ್ಘರಿಸುತ್ತಿರುವಾಗ, ಓರ್ವ ನೈಜ ಮುಸ್ಲಿಮನಾಗಿ ನಾನು ಅವರ ಧಾರ್ಮಿಕ ಭಾವನೆಗಳನ್ನಷ್ಟೇ ಗೌರವಿಸುತ್ತೇನೆ. ಇದರ ಹೊರತು ನನಗೆ ಬೇರೆ ಯಾವುದೂ ಅಗತ್ಯವಿಲ್ಲ ಎಂದು ತೂಸಿ ಹೇಳಿದ್ದಾರೆ.

ಭದ್ರತೆ ಜೊತೆಗೆ ತಮ್ಮ ಕುಟುಂಬದೊಂದಿಗೆರುವ ಹಬೀಬುದ್ದೀನ್​ ತೂಸಿ

ಬಿಜೆಪಿ ಕಾರ್ಯಕರ್ತನಲ್ಲ... ಆದರೆ ಮೋದಿ ಬೆಂಬಲಿಗ...

ಇನ್ನೊಂದೆಡೆ ಆರ್ಟಿಕಲ್​ 370 ರದ್ದತಿಗೆ ಬೆಂಬಲ ವ್ಯಕ್ತಪಡಿಸಿರುವ ತೂಸಿ, ಕಾಶ್ಮೀರದ ಜನತೆಯ ಒಳಿತಿಗಾಗಿ ಈ 370 ರದ್ದತಿ ಉತ್ತಮ ನಿರ್ಧಾರ. ನಾನು ಬಿಜೆಪಿಯ ಬೆಂಬಲಿಗನೂ ಅಲ್ಲ. ಪಕ್ಷವನ್ನೂ ಸೇರಿಲ್ಲ. ಆದರೆ, ನಾನು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.

ತಾಜ್​ಮಹಲ್​ ಮುಂಭಾಗದಲ್ಲಿ ಹಬೀಬುದ್ದೀನ್​ ತೂಸಿ

ಝಡ್​ ಪ್ಲಸ್​ ಸೆಕ್ಯುರಿಟಿಗಾಗಿ ಪ್ರಧಾನಿಗೆ ಮನವಿ...

ಈ ನಡುವೆ ತೂಸಿ, ಪ್ರಧಾನ ಮಂತ್ರಿಗಳ ಕಾರ್ಯಾಲಕ್ಕೆ ಪತ್ರ ಬರೆದು, ಬಾಬ್ರಿ ಮಸೀದಿ ಪ್ರಕರಣವನ್ನು ಇತ್ಯರ್ಥಗೊಳಿಸಲು ಮುಂದಡಿ ಇಟ್ಟಿರುವ ನನಗೆ ಜೀವ ಬೆದರಿಕೆ ಇದೆ. ಹಲವರಿಂದ ಬೆದರಿಕೆ ಬಂದಿದೆ. ಹೀಗಾಗಿ ಒಂದು ವರ್ಷದ ಹಿಂದೆಯೇ ತನಗೆ ಝಡ್​ ಪ್ಲಸ್​ ಭದ್ರತೆ ಒದಗಿಸಬೇಕೆಂದು ತೂಸಿ ಪ್ರಧಾನಿಗೆ ಮನವಿ ಮಾಡಿದ್ದರು.

ABOUT THE AUTHOR

...view details