ತಿರುವನಂತಪುರಂ (ಕೇರಳ):ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಕಸ್ಟಮ್ಸ್ ಹೌಸ್‌ನಲ್ಲಿ 9 ಗಂಟೆಗಳ ಕಾಲ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ನೋಟಿಸ್ ಜಾರಿಯಾಗಿದ್ದ ಹಿನ್ನೆಲೆ ಶಿವಶಂಕರ್ ಅವರು ಕಸ್ಟಮ್ಸ್ ಹೌಸ್‌ಗೆ ಮಂಗಳವಾರ ಸಂಜೆ 5 ಗಂಟೆ ವೇಳೆಗೆ ಆಗಮಿಸಿದ್ದು, ಬುಧವಾರ ಮುಂಜಾನೆ 2:30ರ ಸುಮಾರಿಗೆ ವಿಚಾರಣೆ ಮುಗಿಸಿ ಹೊರಬಂದಿದ್ದಾರೆ. ಚಿನ್ನ ಕಳ್ಳಸಾಗಣೆ ಪ್ರಕರಣದ ಬಗ್ಗೆ ಕಸ್ಟಮ್ಸ್ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸುತ್ತಿರುವ ತನಿಖೆಯ ಭಾಗವಾಗಿ ಅವರನ್ನು ವಿಚಾರಣೆ ನಡೆಸಲಾಗಿದೆ. ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ಇಷ್ಟು ದೀರ್ಘಾವಧಿಯವರೆಗೆ ವಿಚಾರಣೆ ನಡೆಸಿರುವುದು ಕೇರಳದಲ್ಲಿ ಇದೇ ಮೊದಲಾಗಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಬಂಧಿತ ಸರಿತ್ ಪಿಎಸ್ ಮತ್ತು ಸ್ವಪ್ನಾ ಸುರೇಶ್ ಅವರೊಂದಿಗಿನ ಸಂಪರ್ಕದ ಬಗ್ಗೆ ಶಿವಶಂಕರ್ ಅವರನ್ನು ಪ್ರಶ್ನೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂ.ಶಿವಶಂಕರ್ ಬಂಧಿತರ ಜೊತೆ ಫೋನ್ ಸಂಭಾಷಣೆಯಲ್ಲಿ ಮಾತನಾಡಿರುವುದು ದಾಖಲೆಗಳಿಂದ ಬಹಿರಂಗಗೊಂಡಿದೆ ಎಂದು ತಿಳಿದುಬಂದಿದೆ.
ಅಲ್ಲದೆ, ಸ್ವಪ್ನಾ ಸುರೇಶ್, ಐಟಿ ವಿಭಾಗದ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು, ಅದೇ ಸಂದರ್ಭದಲ್ಲಿ ಶಿವಶಂಕರ್ ಐಟಿ ಕಾರ್ಯದರ್ಶಿಯಾಗಿದ್ದರು. ಏಪ್ರಿಲ್ 20ರಿಂದ ಜೂನ್ 1ರವರೆಗೆ ಆರೋಪಿ ಸರಿತ್, ಶಿವಶಂಕರ್ ಅವರಿಗೆ ಹಲವಾರು ಬಾರಿ ದೂರವಾಣಿ ಕರೆ ಮಾಡಿದ್ದರು ಮತ್ತು ಶಿವಶಂಕರ್ ಕೂಡ ಸರಿತ್‌ಗೆ ಐದು ಬಾರಿ ಕರೆ ಮಾಡಿದ್ದಾರೆ ಎಂದು ಫೋನ್ ಕರೆ ದಾಖಲೆಗಳಿಂದ ಗೊತ್ತಾಗಿದೆ.
ತಿರುವನಂತಪುರಂನಲ್ಲಿ 14.82 ಕೋಟಿ ರೂ. ಮೌಲ್ಯದ 30 ಕೆಜಿ ಚಿನ್ನ ಕಳ್ಳಸಾಗಣೆ ಪ್ರಕರಣದ ಬಳಿಕ ಇವೆಲ್ಲ ಬೆಳವಣಿಗೆಗಳು ಬೆಳಕಿಗೆ ಬಂದಿವೆ. ಬಂಧಿತ ನಾಲ್ವರು ಆರೋಪಿಗಳ ವಿರುದ್ಧ 1967ರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 16, 17 ಮತ್ತು 18ರ ಅಡಿಯಲ್ಲಿ ಎನ್ಐಎ ಎಫ್ಐಆರ್ ದಾಖಲಿಸಿದೆ, ಅದರಲ್ಲಿ ಮೂವರನ್ನು ಬಂಧಿಸಲಾಗಿದೆ.