ನವದೆಹಲಿ: ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುವ ಪಾಕಿಸ್ತಾನದ ನಿರ್ಧಾರಕ್ಕೆ ಭಾರತ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ.
ಈ ಬಗ್ಗೆ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಅವರು, ಮಿಲಿಟರಿ ಆಕ್ರಮಿತ ಪ್ರದೇಶದ ಸ್ಥಿತಿಯನ್ನು ಬದಲಾಯಿಸುವ ಪಾಕಿಸ್ತಾನದ ಯಾವುದೇ ಕ್ರಮಕ್ಕೆ ಕಾನೂನು ಆಧಾರಗಳಿಲ್ಲ. ಅದು ಸಂಪೂರ್ಣವಾಗಿ ಅನೂರ್ಜಿತವಾಗಿದೆ ಎಂದು ಕಿಡಿಕಾರಿದರು.
ಗಿಲ್ಗಿಟ್-ಬಾಲ್ಟಿಸ್ತಾನ್ ಶಾಸಕಾಂಗ ಸಭೆಗೆ ನವೆಂಬರ್ 15ರಂದು ಚುನಾವಣೆ ನಡೆಯಲಿದೆ ಎಂದು ಪಾಕಿಸ್ತಾನ ಪ್ರಕಟಿಸಿದೆ.
ನಮ್ಮ ನಿಲುವು ಯಾವಾಗಲೂ ಸ್ಪಷ್ಟ ಮತ್ತು ಸ್ಥಿರವಾಗಿರುತ್ತದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಕೇಂದ್ರಾಡಳಿತದ ಸಂಪೂರ್ಣ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿದ್ದು, ಹಾಗೆಯೇ ಉಳಿಯುತ್ತವೆ ಎಂದು ಹೇಳಿದರು.
ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶವನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವ ಪಾಕಿಸ್ತಾನ, ಭಾರತ-ಚೀನಾ ಲಡಾಖ್ ಸಂಘರ್ಷದ ಲಾಭ ಪಡೆದು ಅಲ್ಲಿ ಚುನಾವಣೆಗಳನ್ನು ನಡೆಸಲು ಹವಣಿಸುತ್ತಿದೆ ಎಂದರು.
ಪಾಕಿಸ್ತಾನದ ಮಾಧ್ಯಮಗಳ ಹೇಳಿಕೆ ಉಲ್ಲೇಖಿಸಿದ ಶ್ರೀವಾಸ್ತವ್, ಭಾರತದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಪಾಕಿಸ್ತಾನಕ್ಕೆ ಯಾವುದೇ ಅರ್ಹತೆ ಇಲ್ಲ ಎಂದು ತಿರುಗೇಟು ನೀಡಿದರು.