ನವದೆಹಲಿ:ದೇಶಾದ್ಯಂತ ಕೋವಿಡ್ ಅಬ್ಬರ ಜೋರಾಗಿದೆ. ಕಳೆದ ಮೂರೇ ದಿನಗಳಲ್ಲಿ ಬರೋಬ್ಬರಿ 10 ಸಾವಿರ ಹೊಸ ಸೋಂಕಿತ ಪ್ರಕರಣಗಳು ಕಾಣಿಸಿಕೊಂಡಿವೆ. ಇದೀಗ ಒಟ್ಟು ಸೋಂಕಿತರ ಸಂಖ್ಯೆ 60 ಸಾವಿರದ ಗಡಿಗೆ ಬಂದು ತಲುಪಿದೆ.
ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ 3,320 ಹೊಸ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿದ್ದು, 95 ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ಒಟ್ಟು 59,662 ಪ್ರಕರಣಗಳು ಕಾಣಿಸಿಕೊಂಡಿವೆ. ಇದರಲ್ಲಿ 39,834 ಸಕ್ರೀಯ ಪ್ರಕರಣಗಳಿದ್ದು, 17,847 ಮಂದಿ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ 1,981 ಜನರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ನಿನ್ನೆ ಒಂದೇ ದಿನ 52 ಹೊಸ ಪ್ರಕರಣಗಳು ಕಾಣಿಸಿಕೊಂಡಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 757ಕ್ಕೆ ಏರಿಕೆಯಾಗಿದೆ. ಇದರಲ್ಲಿ 376 ಜನರು ಗುಣಮುಖರಾಗಿದ್ದಾರೆ.
ಉಳಿದಂತೆ ಮಹಾರಾಷ್ಟ್ರದಲ್ಲಿ 17,974, ಗುಜರಾತ್ನಲ್ಲಿ 7,012, ದೆಹಲಿ 5,980, ತಮಿಳುನಾಡು 5,409, ರಾಜಸ್ಥಾನ 3,427, ಮಧ್ಯಪ್ರದೇಶ 3,252, ಉತ್ತರಪ್ರದೇಶ 3,071, ಆಂಧ್ರಪ್ರದೇಶ 1,847, ಪಂಜಾಬ್ 1,644, ಪಶ್ಚಿಮ ಬಂಗಾಳ 1,548, ತೆಲಂಗಾಣ 1,123 ಪ್ರಕರಣಗಳು ಕಾಣಿಸಿಕೊಂಡಿವೆ.
42 ಜಿಲ್ಲೆಗಳಲ್ಲಿ ಕಳೆದ 28 ದಿನಗಳಿಂದ ಯಾವುದೇ ಕೋವಿಡ್ ಪ್ರಕರಣ ಕಾಣಿಸಿಕೊಂಡಿಲ್ಲ ಎಂದು ಮಾಹಿತಿ ಸಿಕ್ಕಿದೆ. ಇಲ್ಲಿಯವರೆಗೆ 16,540 ಜನರು ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.