ನವದೆಹಲಿ/ಇಸ್ಲಾಮಾಬಾದ್: ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶಕ್ಕೆ ತಾತ್ಕಾಲಿಕವಾಗಿ ಪ್ರತ್ಯೇಕ ಪ್ರಾಂತ್ಯದ ಸ್ಥಾನಮಾನವನ್ನು ನೀಡಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆದೇಶ ಹೊರಡಿಸಿದ ಬೆನ್ನಲ್ಲೇ ಭಾರತದ ಭೂಪ್ರದೇಶವಾದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶವನ್ನು ತಕ್ಷಣ ಖಾಲಿ ಮಾಡುವಂತೆ ಭಾರತ ಆಗ್ರಹಿಸಿದೆ.
1947 ರಲ್ಲಿ ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದ ಜಮ್ಮು ಮತ್ತು ಕಾಶ್ಮೀರದ ಹಿಂದಿನ ರಾಜಪ್ರಭುತ್ವದ ಭಾಗವಾದ ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ "ತಾತ್ಕಾಲಿಕ-ಪ್ರಾಂತೀಯ ಸ್ಥಾನಮಾನ" ನೀಡಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಭಾನುವಾರ ಪ್ರಕಟಿಸಿದ್ದಾರೆ.
ಅಕ್ರಮ ಮತ್ತು ಬಲವಂತವಾಗಿ ಭಾರತದ ಭೂಪ್ರದೇಶದ ಒಂದು ಭಾಗಕ್ಕೆ ಬದಲಾವಣೆಗಳನ್ನು ತರುವ ಪಾಕಿಸ್ತಾನದ ಪ್ರಯತ್ನವನ್ನು ಭಾರತ ಸರ್ಕಾರ ದೃಢವಾಗಿ ತಿರಸ್ಕರಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ವಕ್ತಾರ ಅನುರಾಗ್ ಶ್ರೀವಾಸ್ತವ್ ಹೇಳಿದ್ದಾರೆ.
"ಗಿಲ್ಗಿಟ್-ಬಾಲ್ಟಿಸ್ತಾನ್" ಎಂದು ಕರೆಯಲ್ಪಡುವ ಪ್ರದೇಶವನ್ನು ಒಳಗೊಂಡಂತೆ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನ ಕೇಂದ್ರಾಡಳಿತ ಪ್ರದೇಶಗಳು ಕಾನೂನಿನ ಪ್ರಕಾರ ಭಾರತದ ಅವಿಭಾಜ್ಯ ಅಂಗವಾಗಿವೆ ಎಂದು ಸರ್ಕಾರ ಪುನರುಚ್ಚರಿಸಿದೆ.
"ಕಾನೂನುಬಾಹಿರವಾಗಿ ಮತ್ತು ಬಲವಂತವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳ ಮೇಲೆ ಪಾಕಿಸ್ತಾನ ಸರ್ಕಾರಕ್ಕೆ ಯಾವುದೇ ಹಕ್ಕು ಇರುವುದಿಲ್ಲ" ಎಂದು ಶ್ರೀವಾಸ್ತವ್ ಹೇಳಿದ್ದಾರೆ. ಪಾಕಿಸ್ತಾನವು ತನ್ನ ಅಕ್ರಮವನ್ನು ಮರೆಮಾಚುವ ಉದ್ದೇಶದಿಂದ ಇಂತಹ ಪ್ರಯತ್ನಗಳನ್ನು ಮಾಡುತ್ತಿದೆ. ಈ ಪಾಕಿಸ್ತಾನ ಆಕ್ರಮಿತ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಏಳು ದಶಕಗಳಿಂದ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ, ಶೋಷಣೆ ಮತ್ತು ಸ್ವಾತಂತ್ರ್ಯ ನಿರಾಕರಣೆಯನ್ನು ಮರೆಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಭಾರತೀಯ ಪ್ರಾಂತ್ಯಗಳ ಸ್ಥಿತಿಯನ್ನು ಬದಲಿಸಲು ಪ್ರಯತ್ನಿಸುವ ಬದಲು, ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಎಲ್ಲಾ ಪ್ರದೇಶಗಳನ್ನು ಕೂಡಲೇ ಖಾಲಿ ಮಾಡುವಂತೆ ಭಾರತ, ಪಾಕಿಸ್ತಾನಕ್ಕೆ ಒತ್ತಾಯಿಸುತ್ತದೆ ಎಂದು ಹೇಳಿದ್ದಾರೆ.